ಹುಬ್ಬಳ್ಳಿ :ಒಂದಿಲ್ಲೊಂದು ಕಾರಣದಿಂದ ಸುದ್ದಿಯಾಗುತ್ತಿರುವ ಕೋವಿಡ್ ಲಸಿಕಾಕರಣದ ಮತ್ತೊಂದು ಎಡವಟ್ಟು ಬಯಲಾಗಿದೆ. ಸರ್ಕಾರದ ತಂತ್ರಾಂಶದಲ್ಲಿನ ಎಡವಟ್ಟಿನಿಂದ ಸಾರ್ವಜನಿಕರು ಪೇಚಾಟಕ್ಕೆ ಸಿಲುಕಿದ್ದಾರೆ.
ಕೋವಿಡ್ ಲಸಿಕಾ ಪ್ರಮಾಣ ಪತ್ರ ಕೋವಿಡ್ ಮೂರನೇ ಅಲೆ ಭೀತಿ ಹಿನ್ನೆಲೆ ಸರ್ಕಾರ 2 ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಕೆಲಸ, ಕಾರ್ಯಗಳಿಗೆ ಅವಕಾಶ ನೀಡುತ್ತಿದೆ. ಹೀಗಾಗಿ, ಲಸಿಕೆ ಹಾಗೂ ಲಸಿಕಾ ಪ್ರಮಾಣ ಪತ್ರ ಪಡೆಯಲು ಮುಂದಾಗುತ್ತಿರುವ ಜನರು ಶಾಕ್ಗೆ ಒಳಗಾಗುತ್ತಿದ್ದಾರೆ.
ಕೆಲವು ಕಡೆ ಲಸಿಕೆ ಪಡೆಯದಿದ್ದರೂ ಸರ್ಟಿಫಿಕೇಟ್ ಬಂದ್ರೆ, ಇನ್ನು ಕೆಲವೆಡೆ ಕೋವಿಡ್ ಲಸಿಕೆ ಪಡೆದರೂ ಪ್ರಮಾಣಪತ್ರ ಬಾರದಿರುವ ಪ್ರಕರಣ ಬೆಳಕಿಗೆ ಬಂದಿವೆ.
ಹುಬ್ಬಳ್ಳಿಯ ಮಂಟೂರು ರೋಡ್ ನಿವಾಸಿ ಎಂ.ಎಸ್.ಸುಂದರ್ ಜುಲೈ 30ರಂದು ಗಾಂಧಿವಾಡ ಲಸಿಕಾ ಕೇಂದ್ರದಲ್ಲಿ ಮೊದಲ ಡೋಸ್ ಲಸಿಕೆ ಪಡೆದಿದ್ದರು. 2ನೇ ಡೋಸ್ ಪಡೆಯಲು ಅಕ್ಟೋಬರ್‌ನಲ್ಲಿ ದಿನಾಂಕ ನೀಡಲಾಗಿತ್ತು.
ಅನಿವಾರ್ಯ ಕಾರಣಗಳಿಂದಾಗಿ ಹೋಗಲು ಸಾಧ್ಯವಾಗಿಲ್ಲ. ಅದಕ್ಕಾಗಿ ಮೊನ್ನೆ (ಗುರುವಾರ) ಎರಡನೇ ಡೋಸ್ ಪಡೆಯಲು ರೈಲ್ವೆ ಆಸ್ಪತ್ರೆಗೆ ಹೋಗಿದ್ದಾರೆ.
ಎರಡನೇ ಡೋಸ್ ಲಸಿಕೆ ಹಾಕುವಂತೆ ಸಿಬ್ಬಂದಿಗೆ ಮೊಬೈಲ್ ಮೆಸೇಜ್ ತೋರಿಸಿದ್ದಾರೆ. ಆಗ ವೈದ್ಯಕೀಯ ಸಿಬ್ಬಂದಿ ಅವರ ಮೊಬೈಲ್ ನಂಬರ್ ಕೋವಿಡ್ ತಂತ್ರಾಂಶದಲ್ಲಿ ಹಾಕುತ್ತಿದ್ದಂತೆ ನಿಮಗೆ ಈಗಾಗಲೇ ಎರಡನೇ ಡೋಸ್ ಆಗಿದೆ ಎಂದು ಹೇಳಿದ್ದಾರೆ.
ಕೋವಿಡ್ ಲಸಿಕಾ ಪ್ರಮಾಣ ಪತ್ರ ಅಲ್ಲದೇ, ಅವರ ಮೊಬೈಲ್ನಲ್ಲಿಯೇ ಪ್ರಮಾಣ ಪತ್ರ ಡೌನ್‌ಲೋಡ್ ಮಾಡಿ ತೋರಿಸಿದ್ದಾರೆ. ಇದರಿಂದ ಸುಂದರ್ ಅವರಿಗೆ ಆಶ್ಚರ್ಯವಾಗಿದೆ. ನಾನು ಇನ್ನೂ ಎರಡನೇ ಡೋಸ್ ತೆಗೆದುಕೊಂಡಿಲ್ಲ. ಅದು ಹೇಗೆ ಪ್ರಮಾಣ ಪತ್ರ ಬರುತ್ತೆ ಎಂದು ಕೇಳಿದ್ದಾರೆ.
ಲಸಿಕಾ ಕೇಂದ್ರದ ಸಿಬ್ಬಂದಿ ಅದರ ಬಗ್ಗೆ ನಮಗೆ ಗೊತ್ತಿಲ್ಲ. ನಿಮಗೆ ಎರಡನೇ ಡೋಸ್ ಹಾಕಲು ಅವಕಾಶ ಇಲ್ಲ ಎಂದು ಹೇಳಿದ್ದಾರೆ. ನಂತರ ಸುಂದರ್ ಎರಡು ಡೋಸ್ ಹಾಕಿಸಿಕೊಂಡಿದ್ದರೇ, ನಾನೇಕೆ ಮತ್ತೆ ಲಸಿಕೆ ತೆಗೆದುಕೊಳ್ಳಲು ಬರುತ್ತಿದ್ದೆ? ಎಂದು ಪ್ರಶ್ನಿಸಿದ್ದಾರೆ.
ಲಸಿಕೆ ಹಾಕಿಸಿಕೊಳ್ಳದೇ ಅವರ ಹೆಸರಿನಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಪ್ರಮಾಣ ಪತ್ರ ಬಂದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸರ್ಕಾರ ತಂತ್ರಾಂಶದತ್ತ ಗಮನಹರಿಸಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕಿದೆ.
ಇದನ್ನೂ ಓದಿ:ಹಣ ವಸೂಲಿಗೆ ಯತ್ನ, ಆಡಿಯೋ ವೈರಲ್.. ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು..