ಹುಬ್ಬಳ್ಳಿ (ಧಾರವಾಡ):ಗ್ಯಾರೇಜ್ ಒಂದರಲ್ಲಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯನ್ನು ವೈಯಕ್ತಿಕ ದ್ವೇಷದ ಹಿನ್ನೆಲೆ, ಸ್ಕ್ರೂ ಡ್ರೈವರ್ನಿಂದ ತಲೆಗೆ ಹೊಡೆದು ಕೊಲೆ ಮಾಡಲು ಯತ್ನಿಸಿದ ಘಟನೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಟೌನ್ ಹಾಲ್ ಎದುರಿನ ಚವ್ಹಾಣ್ ಗ್ಯಾರೇಜ್ನಲ್ಲಿ ನಡೆದಿದೆ.
ಗೋಪನಕೊಪ್ಪದ ನಿವಾಸಿ ವಿಠ್ಠಲ ಬಗರಿಕರ ಹಲ್ಲೆಗೊಳಗಾದ ವ್ಯಕ್ತಿ. ಚವ್ಹಾಣ್ ಗ್ಯಾರೇಜ್ನಲ್ಲಿ ಹಲ್ಲೆಗೊಳಗಾದ ವಿಠ್ಠಲ ಮತ್ತು ಹಲ್ಲೆ ಮಾಡಿದ ಅಸ್ಲಾಂ ಶೇಖ ಎಂಬಾತ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
ಆದರೆ, ಅಸ್ಲಾಂಗೆ ವಿಠ್ಠಲ್ ಮೇಲೆ ವೈಯಕ್ತಿಕ ದ್ವೇಷವಿದ್ದು, ಹಲವಾರು ಬಾರಿ ತಂಟೆ ತೆಗೆದಿದ್ದಾನೆ. ಗ್ಯಾರೇಜ್ ಮಾಲೀಕರು ಈ ಇಬ್ಬರ ಜಗಳ ಬಗೆಹರಿಸಿದ್ದಾರೆ. ಇಷ್ಟಾದರೂ ಅಸ್ಲಾಂ ಶೇಖ ವಿಠ್ಠಲ ಅವರೊಂದಿಗೆ ಕ್ಷುಲಕ ಕಾರಣಕ್ಕೆ ತಂಟೆ ತೆಗೆದು ಸ್ಕ್ರೂ ಡ್ರೈವ್ ನಿಂದ ತಲೆಗೆ ಹೊಡೆದಿದ್ದಾನೆಂದು ತಿಳಿದು ಬಂದಿದೆ.