ಹುಬ್ಬಳ್ಳಿ:ಶಿಕ್ಷಣ ಕ್ಷೇತ್ರದಲ್ಲಿ ಭ್ರಷ್ಟಾಚಾರ ಹುಟ್ಟು ಹಾಕಿದ್ಧೇ ಬಸವರಾಜ ಹೊರಟ್ಟಿ. ಯಾವ ನೈತಿಕತೆ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ ಎಂದು ರಾಷ್ಟ್ರೀಯ ಸ್ವಾಭಿಮಾನಿ ಶಿಕ್ಷಕರ ಸಂಘದ ಸಂಚಾಲಕ ಎಂ.ಭಾರತ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1980 ರಲ್ಲಿ ಪ್ರಥಮ ಬಾರಿಗೆ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಚುನಾಯಿತರಾಗಿ 1999 ರವರೆಗೆ ವಿಧಾನ ಪರಿಷತ್ ಸದಸ್ಯರಿಗೆ ಸಿಗುವ ಎಲ್ಲ ಸೌಲಭ್ಯ ಪಡೆಯುವುದರ ಜೊತೆಗೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಹೈಸ್ಕೂಲ್ನ ದೈಹಿಕ ಶಿಕ್ಷಕರಾಗಿ ವೇತನ ಪಡೆದಿದ್ದಾರೆ. ಇದರಿಂದ ಒಬ್ಬ ನಿರುದ್ಯೋಗ ದೈಹಿಕ ಶಿಕ್ಷಕ ಹುದ್ದೆ ಕಳೆದುಕೊಂಡಿದ್ದಲ್ಲದೇ, ಎರಡು ಹುದ್ದೆಗಳಿಂದ ಸಂಬಳ ಪಡೆಯುವ ಮೂಲಕ ಸರ್ಕಾರಕ್ಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.
ಬಸವರಾಜ ಹೊರಟ್ಟಿ ಅವರ ಅಕ್ರಮಗಳನ್ನು ಪ್ರಶ್ನೆ ಮಾಡಿದವರಿಗೆ ಪದೋನ್ನತಿ, ಮುಂಬಡ್ತಿ ಹಾಗೂ ವೇತನ ತಡೆಯುವುದೇ ಇವರ ಸಾಧನೆಯಾಗಿದೆ. ಶಿಕ್ಷಕರಿಗೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಇವರ ಕೊಡುಗೆ ಶೂನ್ಯ. 42 ವರ್ಷಗಳ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ಹುಟ್ಟು ಹಾಕಿದ್ದೆ ಹೊರಟ್ಟಿ. ಇಂತವರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಶಿಕ್ಷಕ ವೃಂದ ಪಾಠ ಕಲಿಸುವ ಮೂಲಕ ಶಿಕ್ಷಕರ ಶ್ರೇಯೋಭಿವೃದ್ದಿ ಶ್ರಮಿಸುವ ವ್ಯಕ್ತಿಗೆ ಬೆಂಬಲಿಸುವಂತೆ ಮನವಿ ಮಾಡಿದರು.
ಇನ್ನು ಬಸವರಾಜ ಹೊರಟ್ಟಿ ಅವರು 19 ವರ್ಷಗಳ ಕಾಲ ಎರಡು ಕಡೆಗೆ ಸಂಬಳ ಪಡೆದಿರುವ ಬಗ್ಗೆ ನಾವು ದಾಖಲಾತಿಗಳನ್ನು ಬಹಿರಂಗಪಡಿಸುತ್ತೇವೆ. ಹೊರಟ್ಟಿ ಅವರು ಇದು ಸುಳ್ಳು ಎಂದರೆ ತಾವು ಫಲಾನುಭವಿಗಳಾಗಿಲ್ಲ ಎಂಬುವುದರ ಬಗ್ಗೆ ದಾಖಲೆಗಳನ್ನು ನೀಡಲಿ ಎಂದು ಸವಾಲು ಹಾಕಿದರು.
ಓದಿ:ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಬಗ್ಗೆ ಟೀಕೆ - ಟಿಪ್ಪಣಿ ಮಾಡಲ್ಲ: ಬಿಎಸ್ವೈ