ಹುಬ್ಬಳ್ಳಿ:ಲಾಕ್‌ಡೌನ್ ಸಡಿಲಿಕೆಯಾಗಿದ್ದರೂ ಜಿಲ್ಲೆಯಲ್ಲಿ 9 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅವಳಿನಗರದ ಜನರು ಆತಂಕದಿಂದಲೇ ಹೊರಗೆ ಬರುತ್ತಿದ್ದಾರೆ.
ನಗರದಲ್ಲಿ ಜನ ಸಂಚಾರ, ವಾಹನ ದಟ್ಟಣೆ ಸಮಾನ್ಯವಾಗಿ ಕಂಡುಬಂದಿತ್ತು. ಶೇ.75ರಷ್ಟು ನಗರದ ಅಂಗಡಿ ಮುಂಗಟ್ಟುಗಳು ವ್ಯಾಪಾರ ವಹಿವಾಟಿಗೆ ತೆರೆದುಕೊಂಡಿದ್ದರೂ, ದೊಡ್ಡ ದೊಡ್ಡ ಬಟ್ಟೆ ಅಂಗಡಿಗಳೆಲ್ಲ ಬಾಗಿಲು ಮುಚ್ಚಿದ್ದವು. ಆದರೂ ಸಹ ಜನರು ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಯತ್ತ ಆಗಮಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಹಳೇ ಹುಬ್ಬಳ್ಳಿ ಸಂತೆ ಮಾರುಕಟ್ಟೆ ಎಂದಿನಂತೆ ನಡೆಯಿತು. ಆದರೆ, ಗಾಂಧಿ ಮಾರ್ಕೆಟ್, ಜನತಾ ಬಜಾರ್ ಸ್ಥಗಿತವಾಗಿತ್ತು. ದುರ್ಗದಬೈಲ್‌ನಲ್ಲಿ ಬೆರಳೆಣಿಕೆ ದಿನಸಿ ಅಂಗಡಿಗಳು ತೆರೆದುಕೊಂಡಿದ್ದವು. ಕೊಪ್ಪಿಕರ ರಸ್ತೆ, ದಾಜೀಬಾನ್ ಪೇಟೆ, ಮರಾಠಾ ಗಲ್ಲಿಸೇರಿ ಇತರೆಡೆ ಸಾಕಷ್ಟು ಬಟ್ಟೆ ಅಂಗಡಿಗಳು ತೆರೆದಿದ್ದರೂ ಬೃಹತ್ ಬಟ್ಟೆ ಮಳಿಗೆಗಳು ಹಾಗೂ ಚಿನ್ನಾಭರಣ ಮಳಿಗೆಗಳು ತೆರೆದಿಲ್ಲ.
ಬೀದಿ ಬದಿಯ ಗೂಡಂಗಡಿಗಳು, ತಳ್ಳುಗಾಡಿಗಳ ವ್ಯಾಪಾರಸ್ಥರು ಮಾರಾಟ ನಡೆಸಿದರು. ಇಲ್ಲೆಲ್ಲ ಪೊಲೀಸರು ಸಂಚರಿಸುತ್ತ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಎಚ್ಚರಿಕೆ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೇ ಮಾರುಕಟ್ಟೆ ರಸ್ತೆಗಳಾದ ಗಾಂಧಿ ಮಾರ್ಕೆಟ್ನಲ್ಲಿ ಸ್ವಲ್ಪ ಮಟ್ಟಿನ ಟ್ರಾಫಿಕ್ ಜಾಮ್ ಕಂಡುಬಂದಿತು. ವಾಹನ ಸಂಚಾರ ನಡೆಯುತ್ತಿದ್ದರೂ ಸಿಗ್ನಲ್‌ಗಳನ್ನು ಇನ್ನೂ ಆರಂಭಿಸಲಾಗಿಲ್ಲ. ಹೀಗಾಗಿ ಚೆನ್ನಮ್ಮ ಸರ್ಕಲ್, ಹೊಸೂರು, ಕಿಮ್ಸ್, ವಿದ್ಯಾನಗರ ಸೇರಿ ಹಲವೆಡೆ ಆಗಾಗ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.