ಹುಬ್ಬಳ್ಳಿ(ಧಾರವಾಡ) :ಕೋಟ್ಯಂತರ ರೂಪಾಯಿ ವ್ಯಯ ಮಾಡಿ ನಿರ್ಮಾಣ ಮಾಡಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ಅವ್ಯವಸ್ಥೆಯ ಆಗರವಾಗಿದೆ.
ಕಾರವಾರ ರಸ್ತೆಯಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಸಿ ಹಾಗೂ ಒಣಕಸವನ್ನು ಸರಿಯಾಗಿ ಬೇರ್ಪಡಿಸದೇ ಬೇಕಾಬಿಟ್ಟಿ ಎಸೆದು ಬರಲಾಗುತ್ತಿದೆ.
ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಪುನರ್ಬಳಕೆ ಹಾಗೂ ಇಂಧನ ತಯಾರಿಕೆ ಭರವಸೆ ನೀಡಿದ್ದ ಮಹಾನಗರ ಪಾಲಿಕೆ ತ್ಯಾಜ್ಯ ನಿರ್ವಹಣೆ ಹೆಸರಲ್ಲಿ ಕೋಟ್ಯಂತರ ರೂಪಾಯಿ ಪೋಲು ಮಾಡುತ್ತಿದೆ.
ಅವ್ಯವಸ್ಥೆಯ ಆಗರವಾದ ಘನ ತ್ಯಾಜ್ಯ ವಿಲೇವಾರಿ ಘಟಕ ಅಲ್ಲದೇ ಅವ್ಯವಸ್ಥಿತವಾಗಿ ಬೆಂಕಿ ಹಚ್ಚುವ ಮೂಲಕ ಜನರಲ್ಲಿ ಆತಂಕವನ್ನುಂಟು ಮಾಡುವ ಕೆಲಸವನ್ನು ಸಿಬ್ಬಂದಿ ಮಾಡುತ್ತಿದ್ದಾರೆನ್ನುವ ಗಂಭೀರ ಆರೊಪಗಳು ಕೇಳಿ ಬರುತ್ತಿವೆ.
ರಾಜ್ಯದಲ್ಲಿ 2ನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಇಂತಹ ಅವ್ಯವಸ್ಥೆ ತಾಂಡವವಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಕಂಡರೂ ಕಾಣದಂತೆ, ಕೇಳಿದರೂ ಕೇಳದಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಸಂಸದರ ದತ್ತು ಗ್ರಾಮದ ಸರ್ಕಾರಿ ಶಾಲಾ ಜಾಗ ಅತಿಕ್ರಮಣ ಆರೋಪ : ಪ್ರಧಾನಿ ಮೊರೆ ಹೋದ ಗ್ರಾಮಸ್ಥರು
ತ್ಯಾಜ್ಯ ವಿಲೇವಾರಿ ಬಳಿಕ ಗ್ಯಾಸ್ ಸೇರಿ ಹಲವಾರು ಪುನರ್ಬಳಕೆ ಉತ್ಪನ್ನಗಳನ್ನು ಸಿದ್ಧಪಡಿಸುವ ಹುಸಿ ಆಶ್ವಾಸನೆ ನೀಡುತ್ತಿದ್ದಾರೆ. ಆದರೆ, ಯಾವೊಂದು ಮಾತು ಕೂಡ ಕಾರ್ಯರೂಪಕ್ಕೆ ಬರುತ್ತಿಲ್ಲ.
ಇಂತಹದೊಂದು ಅವ್ಯವಸ್ಥೆಗೆ ಬ್ರೇಕ್ ಹಾಕಬೇಕಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.