ಹುಬ್ಬಳ್ಳಿ :ಕೇಂದ್ರ ಮತ್ತು ರಾಜ್ಯ ಸರ್ಕಾರ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆಯೇ ಹೊರತು ಜನರ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ. ಬಜೆಟ್ನಲ್ಲಿ 50 ಸಾವಿರ ಕೋಟಿ ಕೇಳಿದ್ರೆ, ಕೊಟ್ಟಿದ್ದು 2 ಸಾವಿರ ಕೋಟಿ ಮಾತ್ರ. ರಾಜ್ಯದಲ್ಲಿರುವ ಸಂಸದರು ಇಲ್ಲಿ ಹುಲಿ, ಅಲ್ಲಿ ಬೆಕ್ಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಶೇ.30ರಷ್ಟು ಕಮಿಷನ್ ಮೇಲೆ ನಡೆಯುತ್ತಿದೆ. ಇದರ ಬಗ್ಗೆ ದಾಖಲೆಗಳನ್ನು ನೀಡಿದ್ದೇವೆ ಮತ್ತು ಮುಖ್ಯಮಂತ್ರಿ ಅವರ ಪುತ್ರನ ಮೇಲೂ ಕೂಡ ನಾವು ಹಗರಣದ ಆರೋಪ ಮಾಡಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಭ್ರಷ್ಟ ಸರ್ಕಾರಗಳು ಎಂದು ಕಿಡಿಕಾರಿದ್ರು.
ಜನವರಿ 11ಕ್ಕೆ ನಡೆಯಲಿರುವ ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಬ್ಲಾಕ್ ಅಧ್ಯಕ್ಷರಿಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ಮಿಸುವುದು, ಈ ಸಮಾವೇಶದ ಮೂಲಕ ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗೆ ತಯಾರಿ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯತೆಗಳನ್ನು ಸರಿಪಡಿಸಲು ಕಾಂಗ್ರೆಸ್ ಸಂಕಲ್ಪ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮುಂತಾದ ನಾಯಕರು ಸೇರಿದಂತೆ ಪಕ್ಷದ ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದ್ರು. ಸುದ್ದಿಗೋಷ್ಠಿಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಅನಿಲ ಕುಮಾರ್ ಪಾಟೀಲ್, ಅಲ್ತಾಫ ಹಳ್ಳೂರು, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಹಾಗೂ ಇತರ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.
ಇದನ್ನೂ ಓದಿ:ಫೆ. 2ರಿಂದ ಬೆಳಗಾವಿ-ಚೆನ್ನೈ ನಡುವೆ ನೇರ ವಿಮಾನ ಸೇವೆ ಆರಂಭ