ಹುಬ್ಬಳ್ಳಿ:ಕೊರೊನಾ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ರೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವೈದ್ಯರ ತಂಡ ಇದರ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಉತ್ತರ ಕರ್ನಾಟಕದ ಬಡವರ ಸಂಜೀವಿನಿಯಾಗಿರುವ ಕಿಮ್ಸ್ ಆಸ್ಪತ್ರೆ ಕೊರೊನಾ ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿದೆ. ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂತರತಾನಿ ಅವರ ನೇತೃತ್ವದ ವೈದ್ಯರ ತಂಡ ಹಗಲಿರುಳು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಶ್ರಮಿಸುತ್ತಿದೆ.
ನಿರ್ದೇಶಕ ಡಾ. ರಾಮಲಿಂಗಪ್ಪ ಅಂತರತಾನಿ ಲಕ್ಷ ಲಕ್ಷ ಹಣ ಬಾಚಿಕೊಳ್ಳುವ ಅದೆಷ್ಟೋ ಖಾಸಗಿ ಆಸ್ಪತ್ರೆಗಳು ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಇಳಿಯದೇ ಹಿಂದೆ ಸರಿದಿವೆ. ಸರ್ಕಾರಿ ಆಸ್ಪತ್ರೆ ಎಂಬುವ ಕೀಳಿರಿಮೆಗೆ ಒಳಗಾಗಿದ್ದ ಕಿಮ್ಸ್ ಆಸ್ಪತ್ರೆ ಈಗ ಜಗತ್ತಿನ ಮಾರಕ ರೋಗದ ವಿರುದ್ಧ ಸೆಣಸಾಡುತ್ತಿದೆ. ಇಲ್ಲಿನ ವೈದ್ಯರ ಶ್ರಮದಿಂದಾಗಿ ಕಿಮ್ಸ್ ಆಸ್ಪತ್ರೆ ನಿಜಕ್ಕೂ ಉತ್ತರಕರ್ನಾಟಕ ಭಾಗದ ಧನ್ವಂತರಿಯಾಗಿದೆ. ಧಾರವಾಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಎರಡು ಪ್ರಕರಣ ದೃಢಪಟ್ಟಿವೆ. ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ವಿಶೇಷ ಅಂದ್ರೆ 6 ಜನ ಸೋಂಕಿತರು ಕಿಮ್ಸ್ ಆಸ್ಪತ್ರೆಯ ವೈದ್ಯರ ಶ್ರಮದಿಂದ ಹಾಗೂ ಜಿಲ್ಲಾಡಳಿತದ ನೆರವಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಚಿಕ್ಕ ಮಕ್ಕಳಲ್ಲಿ ಸೋಂಕು ದೃಢಪಟ್ಟಿದ್ದು, ಮಕ್ಕಳಿಗಾಗಿ ತಾಯಿಯನ್ನು ಮಕ್ಕಳೊಂದಿಗೆ ಇರಲು ಕಿಮ್ಸ್ ವೈದ್ಯರ ತಂಡ ಅವಕಾಶ ನೀಡಿತ್ತು. ಈಗ ಮಕ್ಕಳು ಕೂಡ ಗುಣಮುಖರಾಗಿದ್ದಾರೆ. ಮಕ್ಕಳ ಆರೈಕೆಯಲ್ಲಿದ್ದ ತಾಯಿಗೆ ಸೋಂಕು ತಗುಲದಂತೆ ನೋಡಿಕೊಳ್ಳುವಲ್ಲಿ ವೈದ್ಯರ ತಂಡದ ಯಶಸ್ವಿಯಾಗಿದ್ದು, ಇದು ವೈದ್ಯರ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಕಿಮ್ಸ್ ವೈದ್ಯರು ಹಾಗೂ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು ಈಗ ಈ ಭಾಗದ ಜನರ ಪಾಲಿನ ದೇವರಂತಾಗಿದ್ದಾರೆ. ಈ ಹೋರಾಟದಲ್ಲಿ ನಿರತರಾಗಿರುವ ವೈದ್ಯರು ಹಾಗೂ ಜಿಲ್ಲಾಡಳಿತಕ್ಕೆ ನಮ್ಮದೊಂದು ಸಲಾಂ..