ಹುಬ್ಬಳ್ಳಿ: ಹಿಂದೂ ದೇವಾಲಯಗಳ ಮೇಲಿನ ಸರ್ಕಾರದ ಹಿಡಿತವನ್ನು ಸಡಿಲಗೊಳಿಸಿ, ಕಾನೂನಿನ ಕಟ್ಟುಪಾಡುಗಳಿಂದ ಅವುಗಳನ್ನು ಮುಕ್ತಗೊಳಿಸುವ ಸುಳಿವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದರು.
ನಗರದಲ್ಲಿ ನಿನ್ನೆ ನಡೆದ ರಾಜ್ಯ ಕಾರ್ಯಕಾರಿಣಿ ಸಮಾರೋಪದಲ್ಲಿ ಮಾತನಾಡಿದ ಅವರು, 'ಹಿಂದೂ ದೇವಾಲಯಗಳ ಮೇಲೆ ನಿಯಂತ್ರಣ ಸಾಧಿಸಲು ಹಲವಾರು ಕಾನೂನಿನ ಕಟ್ಟುಪಾಡುಗಳಿದ್ದು, ಬಜೆಟ್ ಅಧಿವೇಶನಕ್ಕೂ ಮುನ್ನ ಅವುಗಳನ್ನು ತೆಗೆದುಹಾಕಿ, ಸ್ವತಂತ್ರ್ಯ ನಿರ್ವಹಣೆಗೆ ಅವಕಾಶ ನೀಡುವ ಕಾನೂನು ಜಾರಿಗೊಳಿಸಲಾಗುವುದು' ಎಂದರು.
ಆಂಜನೇಯನ ಕ್ಷೇತ್ರ ಅಭಿವೃದ್ಧಿ:
'ಮತಾಂತರ ಕಾಯ್ದೆ ಜಾರಿಗೆ ವಿಶೇಷ ಟಾಸ್ಕ್ ಫೋರ್ಸ್ ರಚಿಸುತ್ತೇವೆ. ರಾಜಕೀಯ ಸ್ಥಿತಿಗತಿಗಳ ಬಗ್ಗೆ ನನಗೆ ಅರಿವಿದೆ. ನಮ್ಮ ಅಜೆಂಡಾ ಸ್ಪಷ್ಟವಾಗಿದೆ. ಇದೇ ವೇಳೆ, ಆಂಜನೇಯನ ಕ್ಷೇತ್ರವನ್ನೂ ಅಭಿವೃದ್ಧಿ ಮಾಡಲಿದ್ದೇವೆ. ಈ ದೇಗುಲವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡುತ್ತೇವೆ. ಆಂಜನಾದ್ರಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ, ಮೋದಿಯವರ ಕೈಯಲ್ಲಿ ಉದ್ಘಾಟನೆ ಮಾಡಿಸುತ್ತೇವೆ. ಇದನ್ನು ಶ್ರೇಷ್ಠವಾದ ಸ್ಥಳವನ್ನಾಗಿ ಮಾಡುತ್ತೇವೆ. ಇದು ನಮ್ಮ ಸರ್ಕಾರ ಸಂಕಲ್ಪ' ಎಂದು ಹೇಳಿದರು.
'ನಮ್ಮ ಗುರಿ ಮೀರಿ ಸಾಧನೆ ಮಾಡುತ್ತೇವೆ. ಮುಂದಿನ ಏಪ್ರಿಲ್‌ನಲ್ಲಿ ನೂತನ ಶಿಕ್ಷಣ ನೀತಿ ಜಾರಿ ಮಾಡುತ್ತೇವೆ. ಶಿಕ್ಷಣ ನೀತಿ ಜಾರಿ ಮಾಡುವ ಮೂಲಕ ಮೋದಿಯವರಿಗೆ ನಮ್ಮ ಬದ್ಧತೆ ತೋರಿಸುತ್ತೇವೆ. ಒಬ್ಬ ರಾಜಕಾರಣಿ ಹಾಗೂ ಒಬ್ಬ ಮುತ್ಸದ್ದಿಯ ಕಣ್ಣು ಮುಂದಿನ ಚುನಾವಣೆ ಮೇಲಿರುತ್ತೆ. ಮೋದಿಯವರು ನನಗೆ ಹಲವಾರು ಮಾರ್ಗದರ್ಶನ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದೇನೆ. ವಿಶೇಷವಾಗಿ ಸಾಮಾಜಿಕ ಸಮತೋಲನ ಕಾಪಾಡಿಕೊಳ್ಳುವ ಕೆಲಸ ಮಾಡಿದ್ದೇನೆ. ಸಾಮಾಜಿಕ ನ್ಯಾಯ ಅನ್ನೋದು ಕೆಲವರಿಗೆ ಬಂಡವಾಳ ಆಗಿದೆ. ಆದ್ರೆ, ನಾನು ಸಕಾರಾತ್ಮಕವಾಗಿ ಸಮಾನಾಂತರ ಅವಕಾಶಗಳನ್ನ ಒದಗಿಸಿ ಕೊಡುತ್ತೇನೆ. ನಮ್ಮ ರಾಜ್ಯದ ತಲಾವಾರು ಆದಾಯ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ' ಎಂದು ಸಿಎಂ ವಿವರಿಸಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಬೊಮ್ಮಾಯಿ, 'ಅಲ್ಲಿ ಎಲ್ಲವೂ ಸರಿ ಇದೆಯೇ?. ಅಲ್ಲಿಯ ಒಬ್ಬ ವಕ್ತಾರ ಅಲ್ಲಿನ ಪರ್ಸೆಂಟೇಜ್ ಬಗ್ಗೆ ಮಾತನಾಡುತ್ತಾನೆ. ಹೀಗಾಗಿ, ಕಾಂಗ್ರೆಸ್ಗೆ ಮಾತನಾಡಲಿಕ್ಕೆ ಯಾವ ನೈತಿಕ ಹಕ್ಕು ಇದೆ?' ಎಂದು ಪ್ರಶ್ನಿಸಿದರು.
ಮೇಕೆದಾಟು ಬಗ್ಗೆ ಕಾಂಗ್ರೆಸ್ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 'ಐದು ವರ್ಷಗಳ ನಿಮ್ಮ ಸರ್ಕಾರದಲ್ಲಿ ಯಾಕೆ ಯೋಜನೆ ಜಾರಿ ಮಾಡಲಿಲ್ಲ. ಒಂದೂವರೆ ವರ್ಷ ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರರಾಗಿದ್ರಿ. ಆಗ ಯೋಜನೆ ಬಗ್ಗೆ ಯಾಕೆ ಯೋಚನೆ ಮಾಡಲಿಲ್ಲ?. ಡಿಪಿಆರ್ ಮಾಡಲಿಕ್ಕೆ ಐದು ವರ್ಷ ಟೈಮ್ ತೆಗೆದುಕೊಂಡರು. ರಾಜಕೀಯ ಪ್ರೇರಿತವಾದ ಪಾದಯಾತ್ರೆ ಮಾಡುತ್ತಿದ್ದಾರೆ. ರಾಜ್ಯದ ಜನರಿಗೆ ಎಲ್ಲವೂ ಗೊತ್ತಿದೆ. ನಮ್ಮದು ಜನರ ಹಾಗೂ ಕನ್ನಡಿಗರ ಹಿತವೇ ಕೇಂದ್ರಬಿಂದುವಾಗಿರುತ್ತೆ. ಇಡೀ ಕಾರ್ಯಕಾರಿಣಿಯಲ್ಲಿ ನಮ್ಮ ಸರ್ಕಾರವನ್ನು ಬೆಂಬಲಿಸಿದ್ದೀರಿ, ವಿಶ್ವಾಸದ ಮಾತುಗಳನ್ನಾಡಿದ್ದೀರಿ. ಸರ್ಕಾರದ ಭದ್ರತೆಯ ಬಗ್ಗೆ ನಿರ್ಣಯಗಳನ್ನ ಮಾಡಿದ್ದೀರಿ' ಎಂದರು.