ಕರ್ನಾಟಕ

karnataka

By

Published : Dec 18, 2021, 1:55 PM IST

ETV Bharat / city

ಕನ್ನಡ ಉಳಿಸಿ ಬೆಳೆಸಬೇಕಾದರೆ ಮತಾಂತರ ತಡೆಯಬೇಕು: ಡಾ.ಬಿ.ವಿ ವಸಂತಕುಮಾರ

ಕನ್ನಡ ಧ್ವಜ ಸುಟ್ಟದ್ದು ತಪ್ಪು. ಅದೇ ರೀತಿ ಮರಾಠಿ ಮುಖಂಡರಿಗೆ ಮಸಿ ಬಳೆದು ಅವಮಾನಿಸಿದ್ದು ಸಹ ತಪ್ಪು. ಮರಾಠಿಗರು ಮತ್ತು ಕನ್ನಡಿಗರನ್ನು ಶತ್ರುಗಳನ್ನಾಗಿ ಮಾಡಿ ಇಂಗ್ಲಿಷ್​​ ಹೇರಲಾಗಿದೆ. ಖಾಸಗಿ ಸಂಸ್ಥೆಗಳನ್ನು ನಡೆಸುವವರು ನಾವೇ ಅಲ್ವಾ?. ಹಾಗಾದ್ರೆ ಯಾರಿಗೆ ಬೈಯಬೇಕು ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ‌.ವಿ. ವಸಂತಕುಮಾರ ಪ್ರಶ್ನಿಸಿದ್ದಾರೆ.

BV Vasanth Kumar
ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ‌.ವಿ. ವಸಂತಕುಮಾರ

ಧಾರವಾಡ: ಕನ್ನಡ ಉಳಿಸಿ, ಬೆಳೆಸಬೇಕಾದರೆ ಮತಾಂತರ ತಡೆಯಬೇಕು ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ‌.ವಿ. ವಸಂತಕುಮಾರ ಹೇಳಿದರು.

ನಗರದ ಸಾಹಿತ್ಯ ಪರಿಷತ್​ ಸಭಾಂಗಣದಲ್ಲಿ ಲೇಖಕಿಯರ ಸಂಘ ಆಯೋಜಿಸಿದ್ದ 'ಕನ್ನಡ ನಾಡು ನುಡಿ ಕಾರ್ಯಕ್ರಮ'ದಲ್ಲಿ ಮಾತನಾಡಿದ ಅವರು, ಕನ್ನಡ ಉಳಿಯಲು ಮತಾಂತರ ತಡೆಯಬೇಕು. ಹೀಗೆ ಹೇಳಿದ ತಕ್ಷಣ ಕೋಮುವಾದಿ, ಆರ್​​ಎಸ್​​ಎಸ್ ಅಂತಾರೆ. ನಮ್ಮ ಬಗ್ಗೆ ಹೀಗೆ ಅಪಪ್ರಚಾರ ಮಾಡುವ ಅನೇಕ ಬುದ್ಧಿ ಜೀವಿಗಳಿದ್ದಾರೆ. ಆದರೆ ಚರಿತ್ರೆಯೊಳಗಿನ ಸತ್ಯಗಳನ್ನು ಹುಡುಕಬೇಕಿದೆ ಎಂದರು.

'ಕನ್ನಡ ನಾಡು ನುಡಿ ಕಾರ್ಯಕ್ರಮ'ದಲ್ಲಿ ಮಾತನಾಡಿದ ಡಾ. ಬಿ‌.ವಿ. ವಸಂತಕುಮಾರ

ಕುವೆಂಪು ಅವರ 'ನೆನಪಿನ ದೋಣಿಯಲಿ' ಕೃತಿಯಲ್ಲಿ ಮತಾಂತರದ ಪ್ರಸ್ತಾಪ ಇದೆ. ಮೈಸೂರಿನ ಹೈಸ್ಕೂಲ್‌ಗೆ ಹೋಗುತ್ತಿದ್ದ ಪ್ರಸ್ತಾಪದಲ್ಲಿ ಅದು ಇದೆ. ಅಲ್ಲಿನ ಸಾಲುಗಳಲ್ಲಿ ಎರಡು ಶಬ್ದಗಳನ್ನು ಗಮನಿಸಬೇಕಿದೆ. "ಕ್ರೈಸ್ತ ಮಿಷನರಿಗಳು ಮತ್ತು ಬ್ರಿಟಿಷ್​​ ಸಾಮ್ರಾಜ್ಯದ ಮುಂಚೂಣಿಯ ದನಗಳಾಗಿ" ಎಂದು ಬರೆದಿದ್ದಾರೆ ಎಂದರು.

ರಾಷ್ಟ್ರಕವಿ ಕುವೆಂಪು ಅವರೇ ಉಲ್ಲೇಖಿಸಿರುವ ಸಾಲು ಇವು. ಹಾಗಾದರೆ ಇಂಗ್ಲಿಷ್ ಒಂದು ಭಾಷೆಯಾ?. ಅಥವಾ ಬ್ರಿಟಿಷ್ ರಾಜಕೀಯದ ಆಯುಧ ಆಗಿದೆಯಾ?. ಇಂದು ಬ್ರಾಹ್ಮಣ ಮತ್ತು ಅಬ್ರಾಹ್ಮಣ ಚರ್ಚೆ ಜೋರಾಗಿದೆ. 1975ರಲ್ಲಿ ಜಾತಿ ಹೋಗಬೇಕು ಅಂತಾ ಚಂಪಾರಂಥವರು ಸಮ್ಮೇಳನ ಮಾಡಿದ್ದರು. ಅವರೆಲ್ಲ ಈಗ ಎಲ್ಲಿ ಹೋಗಿ ನಿಂತಿದ್ದಾರೆ? ಎಂದು ಪ್ರಶ್ನಿಸಿದರು.

ಕನ್ನಡ ಧ್ವಜ ಸುಟ್ಟದ್ದು ತಪ್ಪು. ಅದೇ ರೀತಿ ಮರಾಠಿ ಮುಖಂಡರಿಗೆ ಮಸಿ ಬಳದಿದ್ದು ಸಹ ತಪ್ಪು. ಮರಾಠಿ ಮತ್ತು ಕನ್ನಡ ಶತ್ರುಗಳಾಗಿ ಮಾಡಿ ಇಂಗ್ಲಿಷ್​​ ಹೇರಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವವರು ನಾವೇ ಅಲ್ವಾ?. ಹಾಗಾದ್ರೆ ಯಾರಿಗೆ ಬೈಯಬೇಕು. ಮರಾಠಿಗರನ್ನು ಬೈದಾಗ ರೋಷ ಜಾಸ್ತಿ ಆಗುತ್ತದೆ. ಎಲ್ಲರೂ ಕನ್ನಡಿಗರಾಗಿ ಬಿಡುತ್ತೇವೆ. ಇದನ್ನು ನಾವು ಗಮನಿಸಿದ್ದೇವಾ?. ಇಂಗ್ಲಿಷ್ ಬೇಕು ಅಂತಾ ಕೋರ್ಟ್​ಗೆ ಹೋಗುವವರು ಕನ್ನಡಿಗರೇ ಅಲ್ವಾ? ಎಂದು ವಿಮರ್ಶಿಸಿದರು.

ಎಸಿಬಿ ದಾಳಿ ವೇಳೆ ಪೈಪ್‌ನಲ್ಲಿ ಹಣ ಸಿಕ್ಕಿದ ಬಗ್ಗೆ ಪ್ರತಿಕ್ರಿಯಿಸಿ, ಹೃದಯದ ನಾಳದಲ್ಲಿ ರಕ್ತ ಹರಿಯಲಾರದ ಸ್ಥಿತಿಗೆ ಮನುಷ್ಯ ತಲುಪಿದ್ದಾನೆ. ಆದರೆ ಮನೆಯ ಪೈಪ್‌ಗಳಲ್ಲಿ ಹಣ ಹರಿಸುತ್ತಿದ್ದಾನೆ. ಇದು ಕನ್ನಡದ ಕನಸಾ?. ಇಂದು ನಮ್ಮ ಸಲುವಾಗಿ ನಾಡು ನುಡಿ ಕಟ್ಟಬೇಕಿದೆ. ನನ್ನ ಮಗ ನಾಳೆ ಕಳ್ಳನಾಗಿ ಜೈಲಿಗೆ ಹೋಗಬಾರದು. ಅವರು ಭ್ರಷ್ಟಾಚಾರ ಮಾಡಬಾರದು. ನಮ್ಮ ರಸ್ತೆಗಳಿಗೆ ಮಾಡುತ್ತಿರುವ ಖರ್ಚು ಮನಸ್ಸುಗಳಿಗೆ ಮಾಡುತ್ತಿಲ್ಲ. ಅದಕ್ಕೆ ಹೃದಯದಲ್ಲಿ ರಕ್ತ ಹರಿಯುತ್ತಿಲ್ಲ. ಬದಲಿಗೆ ಪೈಪ್‌ನಲ್ಲಿ ಹಣ ಹರಿಯುತ್ತಿದೆ ಎಂದು ವ್ಯಂಗ್ಯವಾಡಿದರು.

ABOUT THE AUTHOR

...view details