ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಸಿಎಂ ಗದ್ದುಗೆಗೆ ಗುದ್ದಾಟ ಪ್ರಾರಂಭವಾಗಿದೆ. ಈ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಆಗುತ್ತಿದ್ದಂತೆ ಕೆಲ ನಾಯಕರು ಫುಲ್ ಅಲರ್ಟ್ ಆಗಿದ್ದಾರೆ.
ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಇಬ್ಬರು ನಾಯಕರನ್ನು ಕೈಬಿಡುವ ಹೇಳಿಕೆ ಪ್ರಸ್ತಾಪಿಸಿದ್ದು, ಈ ಹಿನ್ನೆಲೆ ಜಗದೀಶ್ ಶೆಟ್ಟರ್ ಫುಲ್ ಅಲರ್ಟ್ ಆಗಿದ್ದಾರೆ. ತಮ್ಮ ಸ್ಥಾನ ಉಳಿಸಿಕೊಳ್ಳುವುದರ ಜೊತೆಗೆ ಸಿಎಂ ಗಾದಿ ಮೇಲು ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ರಾಜ್ಯ ರಾಜಕಾರಣದಲ್ಲಿ ಸಂಚಲನ: ಸ್ಫೋಟಕ ಆಡಿಯೋ ಬಗ್ಗೆ ನಳಿನ್ ಕುಮಾರ್ ಕಟೀಲ್ ಹೀಗಂದರು..
ಜಗದೀಶ್ ಶೆಟ್ಟರ್, ಈಶ್ವರಪ್ಪ ಟೀಂ ಕೈಬಿಡುವ ಮಾತಿದೆ ಎಂದು ಆಡಿಯೋದಲ್ಲಿ ಹೇಳಲಾದ ಹಿನ್ನೆಲೆ ಧಾರವಾಡ ಉಸ್ತುವಾರಿ ಸಚಿವರ ಟೂರ್ ಪ್ಲಾನ್ ಚೇಂಜ್ ಆಗಿದೆ. ಕಳೆದ ಶುಕ್ರವಾರ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳ ಜೊತೆ ಶೆಟ್ಟರ್ ಗುಜರಾತ್ ಪ್ರವಾಸ ಕೈಗೊಂಡಿದ್ದರು. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಭೇಟಿ ಮಾಡಿ, ಕೈಗಾರಿಕೆ ಬಗ್ಗೆ ಚರ್ಚೆ ಮಾಡಿದ್ದರು. ಅಲ್ಲಿಂದ ಬೆಂಗಳೂರಿಗೆ ಬರುವ ಮುನ್ನವೇ ಬಜೆಪಿ ರಾಜ್ಯಾಧ್ಯಕ್ಷರ ಧ್ವನಿ ಎನ್ನಲಾದ ಆಡಿಯೋ ರಿಲೀಸ್ ಆಯಿತು. ಆಡಿಯೋ ಲೀಕ್ ಆಗುತ್ತಿದ್ದಂತೆ ಜಗದೀಶ್ ಶೆಟ್ಟರ್ ಬೆಂಗಳೂರಿಗೆ ಬರುವ ಪ್ಲಾನ್ ರದ್ದು ಮಾಡಿ, ದೆಹಲಿಯತ್ತ ಪ್ರಯಾಣ ಮಾಡಿದ್ದಾರೆ.
ಪ್ರಸಕ್ತ ವಿದ್ಯಮಾನಗಳನ್ನು ದೆಹಲಿಯಲ್ಲೇ ಕುಳಿತು ನೋಡುತ್ತಿರುವ ಶೆಟ್ಟರ್:ಸಚಿವ ಸ್ಥಾನ ಉಳಿಸಿಕೊಳ್ಳಲು ಜಗದೀಶ್ ಶೆಟ್ಟರ್ ವರಿಷ್ಠರನ್ನು ಭೇಟಿ ಮಾಡುತ್ತಿದ್ದಾರೆ. ರಾಜಕೀಯ ಅನುಭವ, ಲಿಂಗಾಯತ ಕೋಟಾ, ಮಾಜಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಮುಂದಿಟ್ಟುಕೊಂಡು ಸಿಎಂ ಗದ್ದುಗೆಗಾಗಿ ಪೈಪೋಟಿ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ.