ಧಾರವಾಡ :ಬೆಂಗಳೂರಿನಲ್ಲಿ ಕಾಶ್ಮೀರಿ ಪಂಡಿತರ ಸರ್ವೇ ವಿಚಾರಕ್ಕೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯೆ ನೀಡಿದ್ದು, ಕಾಶ್ಮೀರಿ ಪಂಡಿತರ ಸರ್ವೇ ಈಗಾಗಲೇ ಆಗಿದೆ ಎಂದು ಮಾಹಿತಿ ಬಂದಿದೆ. ಅವರು ಬಯಸಿದಲ್ಲಿ ಪುನರ್ವಸತಿ ಕಲ್ಪಿಸಿಕೊಡುವುದು ಸರ್ಕಾರದ ಕರ್ತವ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಧಾರವಾಡದಲ್ಲಿ ಕೇಂದ್ರ ಸಚಿವ ಪಲ್ಹಾದ್ ಜೋಶಿ ಸುದ್ದಿಗಾರರೊಂದಿಗೆ ಮಾತನಾಡಿರುವುದು.. ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಶ್ಮೀರ ಅಥವಾ ದೇಶದ ಯಾವುದೇ ಭಾಗದಲ್ಲಿ ಅವರು ಪುನರ್ವಸತಿ ಬಯಸಿದರೂ ಸರ್ಕಾರ ಅದನ್ನು ಕಲ್ಪಿಸಿಕೊಡುವ ಕಾರ್ಯ ಮಾಡುತ್ತದೆ. ಆ ಕಾರ್ಯ ಈಗಲಾದರೂ ಆಗುತ್ತಿರುವುದು ಸಂತಸದ ವಿಷಯ.
ಕಾಂಗ್ರೆಸ್ ಪಕ್ಷ ತುಷ್ಟೀಕರಣದ ರಾಜಕಾರಣ ಮಾಡುತ್ತಾ ಬಂದಿದೆ. ಕಾಶ್ಮೀರ ಫೈಲ್ಸ್ ಸಿನಿಮಾವನ್ನು ಅವರು ವಿರೋಧಿಸುತ್ತಿರುವುದಕ್ಕೂ ಇದೇ ಕಾರಣ. 70 ವರ್ಷಗಳಲ್ಲಿ 58 ವರ್ಷ ಕಾಂಗ್ರೆಸ್ ಆಡಳಿತ ಮಾಡಿತ್ತು, ಆಗ ತುಷ್ಟೀಕರಣ ರಾಜಕಾರಣ, ಆರ್ಟಿಕಲ್ 370, ಕಾಶ್ಮೀರಕ್ಕೆ 35ಎಗಳನ್ನು ನೀಡಿ ಅಲ್ಲಿ ಭಾರತದ ಯಾವುದೇ ಕಾನೂನು ನಡೆಯದಂತೆ ಮಾಡಿದ್ದರು ಎಂದು ಆರೋಪಿಸಿದರು.
ತಾವು ಮಾಡಿರುವ ತುಷ್ಟೀಕರಣ ರಾಜಕಾರಣವನ್ನು ಮುಚ್ಚಿ ಹಾಕಲು, ಕಾಂಗ್ರೆಸ್ನ ಹಳೇ ಇತಿಹಾಸ ಜನರಿಗೆ ಗೊತ್ತಾಗಬಾರದು ಎಂದು ಈಗ ಸಿನಿಮಾವನ್ನು ವಿರೋಧಿಸುತ್ತಿದ್ದಾರೆ. ಆದರೆ, ಸಮಾಜ ಈಗ ಜಾಗೃತ ಆಗಿದೆ. ಕಾಂಗ್ರೆಸ್ನವರ ವಿರೋಧದಿಂದಲೇ ಸಿನಿಮಾ ಜನಪ್ರಿಯ ಆಗಿದೆ.
ಸಿದ್ದರಾಮಯ್ಯ ಅವರು ಸಿನಿಮಾ ನೋಡುವುದಿಲ್ಲ ಎಂದಿದ್ದಾರೆ. ಯಾಕೆಂದರೆ, ಅವರಿಗೆ ಹಿಂದಿ ಬರುವುದಿಲ್ಲ. ಹಾಗಾಗಿ, ಹೋಗುವುದಿಲ್ಲ ಎಂಬ ಕಾರಣವನ್ನು ನೀಡುತ್ತಾರೆ. ಆದರೆ, ಬೇರೆ ಸಿನಿಮಾಗಳನ್ನು ನೋಡಲು ಹೋಗುತ್ತಾರೆ. ಈ ಸಿನಿಮಾದಲ್ಲಿ ಇಂಗ್ಲಿಷ್ ಸಬ್ಟೈಟಲ್ ಇದೆ.
ಸಿದ್ದರಾಮಯ್ಯ ಅವರಿಗೆ ಇಂಗ್ಲೀಷ್ ಕೂಡ ಬರುವುದಿಲ್ಲವಾ? ಸಿನಿಮಾದ ಬಗ್ಗೆ ಇಷ್ಟು ಚರ್ಚೆ ಆಗುತ್ತಿರುವಾಗ ಪಕ್ಕದಲ್ಲಿ ಒಬ್ಬ ಅನುವಾದಕನನ್ನು ಕೂರಿಸಿಕೊಂಡಾದರೂ ಸಿನಿಮಾ ನೋಡಿ ಎಂದು ಹೇಳಿದರು.
ಪಠ್ಯದಲ್ಲಿ ಭಗವದ್ಗೀತೆ ತರುವ ವಿಷಯಕ್ಕೂ ಕಾಂಗ್ರೆಸ್ನವರು ವಿರೋಧ ಮಾಡುತ್ತಿದ್ದಾರೆ. ಹಿಂದುಗಳು, ಕಾಶ್ಮೀರಿ ಪಂಡಿತರು, ಸತ್ಯ ನಾಶವಾದರೂ ಇವರಿಗೆ ಚಿಂತೆ ಇಲ್ಲ. ಅವರು ತುಷ್ಟೀಕರಣ ರಾಜಕಾರಣವನ್ನು ಬಿಡಲು ತಯಾರಿಲ್ಲ. ಎಲ್ಲಿ ಮುಸಲ್ಮಾನರ ಮತ ಸಿಗುವುದಿಲ್ಲವೋ ಎಂಬ ಭಯ ಅವರಲ್ಲಿದೆ. ನೀವು ಮೊದಲು ಸಿನಿಮಾ ನೋಡಿ, ಬಳಿಕ ತಪ್ಪಾಗಿದೆ ಅಂತಾ ಹೇಳಿ ಆಗ ಜನ ಕ್ಷಮಿಸುತ್ತಾರೆ ಎಂದರು.
ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರ್ಪಡೆ ವದಂತಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಬಿಜೆಪಿ ಸ್ಥಳೀಯ ಮುಖಂಡರ ದೂರು ವಿಚಾರದ ಕುರಿತು ಮಾತನಾಡಿದ ಅವರು, ಯಾರು? ಯಾಕೆ? ದೂರು ಕೊಟ್ಟಿದ್ದಾರೆ ಗೊತ್ತಿಲ್ಲ. ಹೊರಟ್ಟಿಯವರಂತೂ ಬಿಜೆಪಿಗೆ ಬರುತ್ತೇನೆ ಎಂದು ಹೇಳಿಲ್ಲ. ಹಾಲು ಇಲ್ಲ, ಬಟ್ಟಲು ಇಲ್ಲ ಗುಟಕ್ ಅಂದ್ರು ಅಂತೆ ಹಾಗೆ ನಡೆದಿದೆ ಇದು ಎಂದು ವ್ಯಂಗ್ಯವಾಡಿದರು.