ಧಾರವಾಡ: ಬೆಂಗಳೂರಿನ ಇಂಟರ ಪ್ರೀನ್ಸ್ ಆರ್ಗನೈಜೇಷನ್ ಅವರು ನೀಡಿದ 25 ಆಕ್ಸಿಜನ್ ಕಾನ್ಸನ್ ಟ್ರೇಟರ್ಗಳನ್ನು ಇಂದು ಸಂಜೆ ನಗರದ ಸರ್ಕಿಟ್ ಹಾಸ್ ಮುಂಭಾಗದಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಜಿಲ್ಲೆಗೆ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದೊಂದಿಗೆ ವಿವಿಧ ಸಂಘ ಸಂಸ್ಥೆಗಳು ಸಹಾಯಹಸ್ತ ನೀಡುತ್ತಿವೆ. ಇದು ಸಂತೋಷದ ವಿಷಯವಾಗಿದೆ. ಬೆಂಗಳೂರಿನ ಇಂಟರ್ಪ್ರಿನ್ಸ್ ಆರ್ಗನೈಸೇಷನ್ ಮುಖ್ಯಸ್ಥ ರಿಷಿಯವರು ತಾವಾಗೀಯೇ ಬಂದು ಜಿಲ್ಲೆಗೆ 25 ಆಕ್ಸಿಜನ್ ಕಾನ್ಸನ್ ಟ್ರೇಟರ್ಗಳನ್ನು ದೊಡ್ಡ ಪ್ರಮಾಣದ ಕೂಡುಗೆಯಾಗಿ ನೀಡಿದ್ದಾರೆ. ಮುಂದೆಯೂ ವೈದ್ಯಕೀಯಕ್ಕೆ ಅಗತ್ಯವಿರುವ ಸಹಾಯವನ್ನು ಮಾಡಲು ಸಿದ್ಧವಿರುವದಾಗಿ ತಿಳಿಸಿದ್ದಾರೆ. ಯಾವುದೇ ಫಲಾಪೇಕ್ಷೆ ಬಯಸದೇ ನಿಸ್ವಾರ್ಥ ಸೇವೆ ನೀಡಿದ ಸಂಸ್ಥೆಗೆ ನಮ್ಮ ಅಭಿನಂದನೆಗಳು ಎಂದು ಶಾಸಕರು ಹೇಳಿದರು.
ಧಾರವಾಡ ಜಿಲ್ಲೆಗೆ 25 ಆಕ್ಸಿಜನ್ ಕಾನ್ಸನ್ ಟ್ರೇಟರ್ ಕೊಡುಗೆ ನೀಡಿದ ಇಂಟರಪ್ರೀನ್ಸ್ ಆರ್ಗನೈಜೇಷನ್ ಅದೇ ರೀತಿ ಅಶ್ಚಿನ್ ಮಹೇಶ ಹಾಗೂ ಮಿತ್ರರು ಜಿಲ್ಲೆಗೆ ಅಗತ್ಯವಿರುವ ಆಕ್ಸಿಜನ್ ಸಿಲಿಂಡರ್ಗಳನ್ನು ಕೂಡುಗೆಯಾಗಿ ನೀಡಿದ್ದಾರೆ. ಅವರ ಸಂಸ್ಥೆಗೂ ಜಿಲ್ಲೆಯ ಪರವಾಗಿ ಶಾಸಕರು ಅಭಿನಂದನೆಗಳನ್ನು ಸಲ್ಲಿಸಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಮಾತನಾಡಿ, ಶಾಸಕರದ ಅರವಿಂದ ಬೆಲ್ಲದ ಅವರ ಸಹಕಾರದಿಂದ ಬೆಂಗಳೂರಿನ ಇಂಟರ್ಪ್ರಿನ್ಸ್ ಆರ್ಗನೈಜೆಷನ್ ಸಂಸ್ಥೆಯು 25 ಆಕ್ಸಿಜನ್ ಕಾನ್ಸನ್ ಟ್ರೇಟರ್ಗಳನ್ನು ಧಾರವಾಡ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ. ಅವರು ನೀಡಿರುವ ಕಾನ್ಸನ್ಟ್ರೇಟರ್ಗಳಲ್ಲಿ 15 ಜಿಲ್ಲಾಸ್ಪತ್ರೆಗೆ ಮತ್ತು 10 ನ್ನು ವಿವಿಧ ಕೋವಿಡ್ ಕಾಳಜಿ (ಕೇರ್ ಸೆಂಟರ್) ಕೇಂದ್ರಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ಕೋವಿಡ್ ಕೇರ್ ಸೆಂಟರ್ಗಳಲ್ಲಿ 10 ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಅಳವಡಿಸಲಾಗಿದೆ. ಆದ್ದರಿಂದ ಜಿಲ್ಲೆಯ ನಾಗರಿಕರು, ತಮ್ಮಲ್ಲಿ ಕೊರೊನಾ ಸೋಂಕು ಕಂಡುಬಂದರೆ ತಕ್ಷಣ ಕೋವಿಡ್ ಕೇರ್ ಸೆಂಟರ್ ಬಂದು ಸೇರಿಕೊಳ್ಳಬೇಕು. ಕೋವಿಡ್ ಕೇರ್ ಸೆಂಟರ್‌ನಲ್ಲಿ ಉಚಿತ ಊಟ, ಔಷಧ, ಆಕ್ಸಿಜನ್ ಗಳನ್ನು ನೀಡಿ ಚಿಕಿತ್ಸೆ ನೀಡಲಾಗುತ್ತದೆ.
ಹಳ್ಳಿಯಲ್ಲಿರುವ ಸೋಂಕಿತರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗೆ, ದಾಖಲಾಗಿ, ಚಿಕಿತ್ಸೆ ಪಡೆದುಕೊಳ್ಳಬೇಕು. ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಜಿಲ್ಲಾಡಳಿತ ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯಿತಿಗಳ ಸಹಕಾರದಲ್ಲಿ ಗ್ರಾಮ ಮಟ್ಟದಲ್ಲಿ ಐಸೋಲೆಷನ್ ಸೆಂಟರ್ಗಳನ್ನು ಆರಂಭಿಸಿ, ಆಕ್ಸಿಜನ್ ಕಾನ್ಸನ್ ಟ್ರೇಟರ್ಗಳನ್ನು ನೀಡಲಾಗುತ್ತಿದೆ. ಜಿಲ್ಲೆಯ ಜನರು ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ, ಕೋವಿಡ್ ನಿಯಂತ್ರಿಸಿ, ಶೂನ್ಯಗೊಳಿಸಲು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದರು.