ಹುಬ್ಬಳ್ಳಿ:ಅಗತ್ಯ ವಸ್ತುಗಳು ಹಾಗೂ ಇಂಧನ ದರ ಏರಿಕೆಯಿಂದ ಜನರು ಹೈರಾಣಾಗಿದ್ದಾರೆ. ಹೀಗಿದ್ದರೂ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಸಾರ್ವಜನಿಕರಿಗೆ ಮತ್ತೊಂದು ಹೊರೆ ಹಾಕುತ್ತಿದೆ. ಕಾಮಗಾರಿ ಪೂರ್ಣಗೊಳ್ಳದಿದ್ದರೂ ಜನರಿಂದ ಹಣ ಪಾವತಿ ಮಾಡಿಸಿಕೊಳ್ಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹುಬ್ಬಳ್ಳಿ ಹಾಗೂ ಗದಗ ಮಾರ್ಗ ಮಧ್ಯದಲ್ಲಿ ನೆಲವಡಿಯ ಟೋಲ್ ಗೇಟ್ನಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆಎಂಬ ಆರೋಪಗಳು ಕೇಳಿಬಂದಿವೆ.
ಹೌದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹುಬ್ಬಳ್ಳಿ-ಗದಗ ಮಧ್ಯದಲ್ಲಿ ನಿರ್ಮಾಣ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೂ ನಿಯಮಗಳನ್ನು ಗಾಳಿಗೆ ತೂರಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಾಲ್ಕು ರಾಜ್ಯ ಹೆದ್ದಾರಿ, ಎರಡು ಇಕ್ಕೆಲಗಳಲ್ಲಿ ಸರ್ವಿಸ್ ರೋಡ್ ಹಾಗೂ ರಸ್ತೆ ಅಗಲೀಕರಣ ಸೇರಿದಂತೆ 3,918 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ನಿರ್ಮಾಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ಇನ್ನೂ ಕಾಮಗಾರಿ ಪೂರ್ಣಗೊಳ್ಳದೆಯೇ ಜನರಿಂದ ಸುಲಿಗೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಸಂಯೋಜಕ ನೀರಲಕೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.