ಹುಬ್ಬಳ್ಳಿ:ಈಗಾಗಲೇ ನಾನು ಶೆಟ್ಟರ್ ಜೊತೆ ಫೋನ್ನಲ್ಲಿ ಮಾತನಾಡಿದ್ದೇನೆ. ಅವರ ಬಗ್ಗೆ ನನಗೆ ಗೌರವ ಇದೆ. ಅವರು ಎರಡು ದಿನಗಳ ನಂತರ ಬೆಂಗಳೂರಿಗೆ ಬರಲಿದ್ದಾರೆ, ಅಲ್ಲಿ ಅವರ ಜೊತೆ ಮಾತನಾಡುತ್ತೇನೆ. ಅವರ ಮೇಲೆ ಪ್ರೀತಿ ವಿಶ್ವಾಸವಿದೆ. ಅವರು ಹಿರಿಯರು, ಅಸಮಾಧಾನ ವ್ಯಕ್ತಪಡಿಸುವುದು ಸಹಜ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ರು.
ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನಗರದಲ್ಲಿಂದು ಮಾತನಾಡಿದ ಸಿಎಂ, ಉತ್ತರ ಕನ್ನಡದಲ್ಲಿ ಪ್ರವಾಹದಿಂದಾಗಿ ಮನೆ ಕುಸಿದಿವೆ, ಹಲವೆಡೆ ರಸ್ತೆ ಕಡಿತವಾಗಿವೆ, 6 ಜನ ಸಾವನ್ನಪ್ಪಿದ್ದಾರೆ. ತೋಟಗಾರಿಕೆ ಬೆಳೆ ನಾಶವಾಗಿದೆ ಕೂಡಲೇ ಕೆಲಸ ಮಾಡಲು ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು.
ಪ್ರವಾಹದಿಂದ ಉತ್ತರ ಕನ್ನಡ ತತ್ತರಿಸಿದೆ.ಈಗಾಗಲೇ ಆರ್ಡಿಪಿಆರ್ 100 ಕೋಟಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ದುರಸ್ತಿಗೆ 100 ಕೋಟಿ ಬಿಡುಗಡೆ ಮಾಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ರು.
ಕೊನೆಯ ಕ್ಷಣದಲ್ಲಿ ಶೆಟ್ಟರ್ ಬೇಟಿ ರದ್ದುಗೊಳಿಸಿದ ಸಿಎಂ:
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಸಚಿವನಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ನಂತರ ಕೇಶವ ಕುಂಜಕ್ಕೆ ಭೇಟಿಯಾಗಿ ಅಲ್ಲಿನ ಪ್ರಮುಖರ ಜೊತೆಗೆ ಸಭೆ ನಡೆಸಿದ್ದರು. ಇದು ಸಾಕಷ್ಟು ರಾಜಕೀಯ ವಿದ್ಯಮಾನಗಳಿಗೆ ಪುಷ್ಟಿ ನೀಡುತ್ತಿರುವ ಹಿನ್ನೆಲೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಗದೀಶ್ ಶೆಟ್ಟರ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಬೇಕಿತ್ತು. ಆದರೆ ಸಮಯದ ಅಭಾವದಿಂದ ಕೊನೆಯ ಕ್ಷಣದಲ್ಲಿ ರದ್ದು ಮಾಡಲಾಯಿತು.