ಹುಬ್ಬಳ್ಳಿ :ಇಂದಿನಿಂದ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಈಗಾಗಲೇ ಸಿದ್ಧತೆ ಮಾಡಲಾಗಿದೆ. ಕೋಮು ಗಲಭೆ ಪ್ರಕರಣದ ಹಿನ್ನೆಲೆ ವಿಡಿಯೋ ಪೋಸ್ಟ್ ಮಾಡಿದ್ದ ಆರೋಪಿ ಅಭಿಷೇಕ ಹಿರೇಮಠ್ ಪೊಲೀಸ್ ಬಿಗಿ ಭದ್ರತೆಯಲ್ಲಿ ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾನೆ.
ವಿವಾದಾತ್ಮಕ ಪೋಸ್ಟ್ ಮಾಡುವ ಮೂಲಕ ಹಳೆ ಹುಬ್ಬಳ್ಳಿ ಗಲಭೆಗೆ ಕಾರಣವಾಗಿದ್ದ ಅಭಿಷೇಕ ಹಿರೇಮಠ್‌ಗೆ ಪರೀಕ್ಷೆ ಬರೆಯಲು ಕೋರ್ಟ್ ಅನುಮತಿ ನೀಡಿದೆ. ಈ ಹಿನ್ನೆಲೆ ನಗರದ ಪಿಯು ಕಾಲೇಜೊಂದರಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಪಿಯು ಕಾಲೇಜಿನಲ್ಲಿ ಇಂದು ಬ್ಯುಜಿನೆಸ್ ಸ್ಟಡೀಸ್ ವಿಷಯದ ಪರೀಕ್ಷೆ ಬರೆಯಲಿದ್ದಾನೆ.
ಪ್ರತ್ಯೇಕ ಕೊಠಡಿ ವ್ಯವಸ್ಥೆ, ಪೊಲೀಸ್ ಹೈಅಲರ್ಟ್ :ಹುಬ್ಬಳ್ಳಿಯ ಕಾರಾಗೃಹದಿಂದ ಪೊಲೀಸ್ ಭದ್ರತೆಯಲ್ಲಿ ಅಭಿಷೇಕ ಹಿರೇಮಠ್ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾನೆ. ಕೋರ್ಟ್ ಅನುಮತಿ ಮೇರೆಗೆ ಪರೀಕ್ಷೆಗೆ ಹಾಜರಾಗಿದ್ದು, ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ಜತೆಗೆ ಮತ್ತಷ್ಟು ಬಂದೋಬಸ್ತ್‌ಗೆ ಪೊಲೀಸರನ್ನ ನಿಯೋಜಿಸಲಾಗಿದೆ. ನಗರದ ಪ್ರಿಯದರ್ಶಿನಿ ಕಾಲೋನಿಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಜತೆಗೆ ಸೂಕ್ತ ಭದ್ರತೆ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಪರೀಕ್ಷೆ ಬರೆದ ಬಳಿಕ ಮತ್ತೆ ಪೊಲೀಸ್ ಭದ್ರತೆಯಲ್ಲಿ ಜೈಲಿಗೆ ರವಾನಿಸಲಿದ್ದಾರೆ. ಪರೀಕ್ಷೆ ಮುಗಿಯುವವರೆಗೂ ಇದೇ ರೀತಿ ನಡೆದುಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ. ಅಭಿಷೇಕ್ ಪರ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದೆ.
ಇದನ್ನೂ ಓದಿ:ಅಭಿಷೇಕ ಹಿರೇಮಠಗೆ ನ್ಯಾಯಾಂಗ ಬಂಧನ.. ಜಾಮೀನು ಪಡೆಯುವ ವಿಶ್ವಾಸದಲ್ಲಿ ಆರೋಪಿ ಪರ ವಕೀಲರು