ಹುಬ್ಬಳ್ಳಿ: ಶಿರಡಿಯ ಸಾಯಿಬಾಬ ದೇವರ ದರ್ಶನ ಹಾಗೂ ಸೇವೆಗಳಿಗೆ ಸಾರ್ವಜನಿಕರಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಶಿರಡಿಗೆ ಬಸ್ ಸಂಚಾರವನ್ನು ಪುನಾರಂಭಿಸಲಾಗಿದೆ. ಅಲ್ಲದೇ ದಸರಾ ಹಬ್ಬಕ್ಕೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ 125 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ವಾ.ಕ.ರಾ.ಸಾ ಸಂಸ್ಥೆ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದರಿಂದ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಶಿರಡಿಯ ಸಾಯಿಬಾಬ ದೇವಸ್ಥಾನ ಸೇರಿದಂತೆ ಧಾರ್ಮಿಕ ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಹೀಗಾಗಿ ನಗರದಿಂದ ಅಲ್ಲಿಗೆ ಸಂಚರಿಸುತ್ತಿದ್ದ ಬಸ್ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗೆ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಇಳಿಕೆಯಾಗುತ್ತಿರುವ ಹಿನ್ನೆಲೆ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ.
ಅ.7ರಿಂದ ಸಾಯಿಬಾಬ ದೇವರ ದರ್ಶನ ಮತ್ತು ಸೇವೆಗಳಿಗೆ ಭಕ್ತಾದಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಹುಬ್ಬಳ್ಳಿಯಿಂದ ಎಸಿ ಸ್ಲೀಪರ್ ಮತ್ತು ಮಲ್ಟಿ ಆ್ಯಕ್ಸಲ್ ವೋಲ್ವೋ ಬಸ್ಗಳ ಸಂಚಾರವನ್ನು ಪುನಾರಂಭಿಸಲಾಗಿದೆ. ಈ ಬಸ್ಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ.
ಹೀಗಿದೆ ಪ್ರಯಾಣ ದರ:
ಸ್ಲೀಪರ್ ಬಸ್ ಸಂಜೆ 7ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತದೆ. ಮರುದಿನ ಬೆಳಗ್ಗೆ7-30ಕ್ಕೆ ಶಿರಡಿ ತಲುಪುತ್ತದೆ. ಶಿರಡಿಯಿಂದ ಸಂಜೆ 7ಕ್ಕೆ ಬಿಟ್ಟು ಮರುದಿನ ಬೆಳಗ್ಗೆ 7-30ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಪ್ರಯಾಣ ದರ ರೂ. 1,110 ರೂ.
ವೋಲ್ವೋ ಬಸ್ ರಾತ್ರಿ 8ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತದೆ. ಮರುದಿನ ಬೆಳಗ್ಗೆ 7ಕ್ಕೆ ಶಿರಡಿ ತಲುಪುತ್ತದೆ. ಶಿರಡಿಯಿಂದ ರಾತ್ರಿ 8ಕ್ಕೆ ಬಿಟ್ಟು ಮರುದಿನ ಬೆಳಗ್ಗೆ 7ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಪ್ರಯಾಣ ದರ ರೂ.1,070 ರೂ.