ಹುಬ್ಬಳ್ಳಿ:ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇದೆ. ಕೊಲೆ, ಚಾಕು ಇರಿತ ಪ್ರಕರಣ ಮಾಸುವ ಮುನ್ನವೇ ಮೀಟರ್ ಬಡ್ಡಿ ಹಾವಳಿಯ ಪ್ರಕರಣ ಬೆಳಕಿಗೆ ಬರುತ್ತಿವೆ. ಆದರೆ, ಸೂಕ್ತ ಕಾರ್ಯಾಚರಣೆ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆ ಪ್ರಕರಣಗಳು ಧೂಳು ಹಿಡಿಯುತ್ತಿವೆ.
ಹೌದು.. ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ಹಾವಳಿ ತಪ್ಪಿಸಲು ಪೊಲೀಸ್ ಇಲಾಖೆ ಅದೆಷ್ಟೋ ಕ್ರಮಗಳು ಕೈಗೊಂಡರೂ ಕಡಿವಾಣ ಹಾಕಲು ಮಾತ್ರ ಸಾಧ್ಯವಾಗುತ್ತಿಲ್ಲ. ನಗರದಲ್ಲಿ ಮತ್ತೆ ಮೀಟರ್ ಬಡ್ಡಿ ಕುಳಗಳು ಬಾಲ ಬಿಚ್ಚಲಾರಂಭಿಸಿದ್ದಾರೆ. ಕೇಶ್ವಾಪುರದಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿಯಾಗಿದೆ.
ನಾಲ್ವರ ತಂಡ ಕೇಶ್ವಾಪುರ ವ್ಯಾಪ್ತಿಯ ಮಹಿಳೆಯೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿ ಎಳೆದಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ. ರೇಣು ಕಿರಣ ಮಾಗಡಿ (48) ಎಂಬ ಮಹಿಳೆಯ ಮನೆಗೆ ಏಕಾಏಕಿ ನುಗ್ಗಿ ದುಷ್ಕರ್ಮಿಗಳು ಗಲಾಟೆ ನಡೆಸಿದ್ದಾರೆ. ಬಳಿಕ ಮನೆಯಿಂದ ಹೊರ ಹೋಗುವಂತೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲ ಮಹಿಳೆಯನ್ನು ಎಳೆದಾಡಿದ್ದು ಹಲ್ಲೆಗೆ ಕೂಡಾ ಮುಂದಾಗಿದ್ದಾರೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.