ಹುಬ್ಬಳ್ಳಿ: ನಗರದ ಹಳೆ ಬಸ್ ನಿಲ್ದಾಣ ಅಂದ್ರೆ ಹುಬ್ಬಳ್ಳಿಗರಿಗೆ ಅಷ್ಟೇ ಅಲ್ಲದೆ ಅದೆಷ್ಟೊ ಜನರಿಗೆ ಬಲುಪ್ರೀತಿ. ನಗರದ ಕೇಂದ್ರಬಿಂದುವಾಗಿ ಹಳ್ಳಿಯಿಂದ ದಿಲ್ಲಿಯವರೆಗೆ ಪ್ರಯಾಣಿಸಲು 53 ವರ್ಷಗಳಿಂದ ಅನುಕೂಲವಾಗಿದ್ದ ಜನರ ನೆಚ್ಚಿನ ನಿಲ್ದಾಣ ಇನ್ನು ನೆನೆಪು ಮಾತ್ರ.
ಭಾವನೆಯ ಬೀಡಾಗಿದ್ದ 'ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ' ಇನ್ನೂ ನೆನಪು ಮಾತ್ರ..! ವಾಣಿಜ್ಯ ನಗರಿ ಹುಬ್ಬಳ್ಳಿಯ ಹಾಟ್ ಸ್ಪಾಟ್ ಆಗಿದ್ದ ಹಳೆ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಐವತ್ಮೂರು ವರ್ಷಗಳಿಂದ ನಿರಂತರವಾಗಿ, ರಾಜ್ಯದ ಎಲ್ಲಾ ಜಿಲ್ಲೆಯಿಂದ ಬರುವ ಪ್ರಯಾಣಿಕರಿಗೆ ಯಾವುದೇ ಅಡೆತಡೆ ಹಾಗೂ ಗೊಂದಲ ಉಂಟಾಗದಂತೆ ಸುಖಕರ ಪ್ರಯಾಣಕ್ಕೆ ಸಾಕ್ಷಿಯಾಗಿತ್ತು. ಜೊತೆಗೆ ಇದೇ ಬಸ್ ನಿಲ್ದಾಣವನ್ನು ಅವಲಂಬಿಸಿ ಅದೆಷ್ಟೊ ಜನರು ಜೀವನ ನಡೆಸುತ್ತಿದ್ದರು. ಸದ್ಯ ಹಲವಾರು ಜನರ ಭಾವನೆಯ ಬೀಡಾಗಿದ್ದ ಹಳೆ ಬಸ್ ನಿಲ್ದಾಣ ಇತಿಹಾಸದ ಪುಟ ಸೇರಿದೆ.
ತಲೆ ಎತ್ತಲಿದೆ ಹೈಟೆಕ್ ಬಸ್ ನಿಲ್ದಾಣ
ಸದ್ಯ ಹುಬ್ಬಳ್ಳಿ ಸ್ಮಾರ್ಟ್ ಆಗುತ್ತಾ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಈ ನಿಟ್ಟಿನಲ್ಲಿ ಹಳೆ ಬಸ್ ನಿಲ್ದಾಣವನ್ನು ಕೆಡವಲಾಗಿದೆ.35 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜಿ+2 ಮಾದರಿಯ ಹೈಟೆಕ್ ಬಸ್ ನಿಲ್ದಾಣದ ತಲೆ ಎತ್ತಲಿದ್ದು, ಪ್ರಯಾಣಿಕರ ಸೇವೆಗೆ ಸಿದ್ಧವಾಗಲಿದೆ.
ಇನ್ನು ನಿರ್ಮಾಣವಾಗಲಿರುವ ಬಸ್ ನಿಲ್ದಾಣದಲ್ಲಿ ಬಿಆರ್ಟಿಎಸ್ ಬಸ್ ನಿಲುಗಡೆಗೆ ಪ್ಲಾಟ್ ಫಾರಂ, ಮಹಿಳಾ ಮತ್ತು ಪುರುಷರ ಶೌಚಾಲಯ, ಸ್ಟಾಫ್ ರೂಂ, ಪ್ರಥಮ ಚಿಕಿತ್ಸಾ ಕೊಠಡಿ, ಸೇರಿದಂತೆ ಅನೇಕ ಸೌಲಭ್ಯಗಳು ಪ್ರಯಾಣಿಕರಿಗೆ ದೊರಕಲಿವೆ. ಆದಷ್ಟು ಬೇಗ ಕಾಮಗಾರಿ ಮುಗಿಯುವ ಮುನ್ಸೂಚನೆಯನ್ನೂ ಸಹ ಅಧಿಕಾರಿಗಳು ನೀಡಿದ್ದಾರೆ. ಆದ್ರೆ ಭರವಸೆ ಮಾತು ಬಿಟ್ಟು ಕಾಮಗಾರಿ ಪೂರ್ಣಗೊಳಿಸಿ ಹಳೆ ಬಸ್ ನಿಲ್ದಾಣ, ಹೊಸದಾಗಿ ರೂಪತಳೆಯಲಿ ಎಂಬುದು ಸಾರ್ವಜನಿಕರ ಒತ್ತಾಯ.