ಹುಬ್ಬಳ್ಳಿ:ಹಳೇ ಬಸ್ ನಿಲ್ದಾಣದಲ್ಲಿನ ಅಂಗಡಿ ಮಾಲೀಕರು ಹಾಗೂ ವಾಯವ್ಯ ಸಾರಿಗೆ ಇಲಾಖೆ ಅಧಿಕಾರಿಗಳ ನಡುವಿನ ವಾಗ್ವಾದ ಇನ್ನೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ಹುಬ್ಬಳ್ಳಿ: ಇನ್ನೂ ಮುಗಿಯದ ಮಳಿಗೆದಾರರು ಹಾಗೂ ಸಾರಿಗೆ ಅಧಿಕಾರಿಗಳ ವಾಗ್ವಾದ ಹೌದು..ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಲ್ಲಿ 32 ವಾಣಿಜ್ಯ ಮಳಿಗೆಗಳಿವೆ. 30 ಸಾವಿರದಿಂದ 7 ಲಕ್ಷ ರೂ. ವರೆಗೆ ಮಾಸಿಕ ಬಾಡಿಗೆ ಮೇಲೆ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಇದೀಗ ಸ್ಮಾರ್ಟ್ ಸಿಟಿ ಯೋಜನೆಯ 30 ಕೋಟಿ ರೂ. ವೆಚ್ಚದಲ್ಲಿ ಈ ಬಸ್ ನಿಲ್ದಾಣಕ್ಕೆ ಹೊಸ ರೂಪ ನೀಡಲು ಸಾರಿಗೆ ಇಲಾಖೆ ಯೋಜನೆ ರೂಪಿಸಿದೆ.
ಹೊಸ ಬಸ್ ನಿಲ್ದಾಣ ನಿರ್ವಿುಸುವುದು ಖಚಿತವಾಗುತ್ತಿದ್ದಂತೆ ವಿಭಾಗೀಯ ನಿಯಂತ್ರಣಾದಿಕಾರಿ ಹೆಚ್.ರಾಮನಗೌಡ ಜೂನ್ 19ರಂದು ಅಂಗಡಿ ಮಾಲೀಕರ ಬಳಿ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಲು ತಾವು ಸಿದ್ಧವಿರುವುದಾಗಿ ಹಾಗೂ ತಮ್ಮದು ಯಾವುದೇ ಆಕ್ಷೇಪಣೆಗಳಿಲ್ಲ ಎಂದು ಒಪ್ಪಿಗೆ ಪತ್ರ ಬರೆಯಿಸಿಕೊಂಡಿದ್ದರು.
ಆದ್ರೀಗ ಕೊರೊನಾದಿಂದ ಪ್ರಯಾಣಿಕರ ಸಂಖ್ಯೆಯೂ ಇಳಿಮುಖವಾಗಿರುವುದರ ಜೊತೆಗೆ ಹಳೇ ಬಸ್ ನಿಲ್ದಾಣವನ್ನು ಗ್ರಾಮೀಣ ಸಾರಿಗೆ ಬಸ್ಗಳ ಓಡಾಟಕ್ಕೆ ಸೀಮಿತಗೊಳಿಸಲಾಗಿದೆ. ಹೀಗಾಗಿ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ಈ ಸಮಯದಲ್ಲಿ ಮಳಿಗೆಗೆಗಳನ್ಮು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಅಂಗಡಿ ಮಾಲೀಕರು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪದ ಸಾರಿಗೆ ಇಲಾಖೆ ಅಧಿಕಾರಿಗಳು, ಮಳಿಗೆ ತೆರವುಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ.
ಇನ್ನು, ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯವರು ಮಳಿಗೆ ತೆರವುಗೊಳಿಸಿ, ಕಟ್ಟಡ ಕೆಡವಿದ ಬಳಿಕ ತಮಗೆ ತಿಳಿಸುವಂತೆ ವಾಯವ್ಯ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.