ಹುಬ್ಬಳ್ಳಿ:ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ (Hubli) ದಿನದಿಂದ ದಿನಕ್ಕೆ ಗಾಂಜಾ ಘಾಟು ಹೆಚ್ಚುತ್ತಿದೆ. ಅಲ್ಲದೇ ಎಲ್ಲೆಂದರಲ್ಲಿ ದಂ ಮಾರೋ ದಂ ಅಡ್ಡಗಳು ತಲೆ ಎತ್ತುತ್ತಿವೆ. ಜತೆಗೆ ಗಾಂಜಾ ವಹಿವಾಟಿಗೆ (marijuana business) ಹುಬ್ಬಳ್ಳಿಯೇ ಕೇಂದ್ರ ಸ್ಥಾನ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಪೊಲೀಸ್ ಆಯುಕ್ತ ಲಾಬೂರಾಮ್ ಪ್ರತಿಕ್ರಿಯೆ ಗೋವಾ, ಕಾರವಾರ, ಓಂ ಬೀಚ್‌ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಿಂದಲೇ ಗಾಂಜಾ ಸರಬರಾಜು ಮಾಡಲಾಗುತ್ತಿದೆ ಎನ್ನಲಾಗ್ತಿದೆ. 10 ತಿಂಗಳಲ್ಲಿ 42 ಎನ್‌ಡಿಪಿಎಸ್ (ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ) ಪ್ರಕರಣಗಳು ದಾಖಲಾಗಿದ್ದು, ವಾಣಿಜ್ಯ ನಗರಿ ಹೆಸರಿಗೆ ಮಸಿ ಬಳಿಯಲು ಗಾಂಜಾ ದರೋಡೆಕೋರರು ಹುಬ್ಬಳ್ಳಿಯನ್ನೇ ಅಡ್ಡೆಯನ್ನಾಗಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ವಾಣಿಜ್ಯ ಚಟುವಟಿಕೆ ನೆಪದಲ್ಲಿ ಅಕ್ರಮ
ವಾಣಿಜ್ಯ ಚಟುವಟಿಕೆಗಳ ನೆಪದಲ್ಲಿ ಪಕ್ಕದ ರಾಜ್ಯಗಳಿಂದ ಇಲ್ಲಿಗೆ ಗಾಂಜಾ ತಂದು ಮಧ್ಯವರ್ತಿಗಳ ಮೂಲಕ ಗೋವಾ, ಕಾರವಾರ, ಓಂ ಬೀಚಗಳಿಗೆ ರವಾನೆ ಮಾಡುತ್ತಿದ್ದಾರೆ. 2020ರಲ್ಲಿ 24 ಹಾಗೂ 2019ರಲ್ಲಿ 16 ಪ್ರಕರಣಗಳು ದಾಖಲಾಗಿದ್ದವು. ಆದರೆ, ಈ ವರ್ಷ (2021) 10 ತಿಂಗಳಲ್ಲಿ 42 ಪ್ರಕರಣಗಳು ಎನ್ಡಿಪಿಎಸ್ನಲ್ಲಿ ದಾಖಲಾಗಿವೆ.
ಆಂಧ್ರ- ಗೋವಾ - ಮಹಾರಾಷ್ಟ್ರಕ್ಕೆ ಇದೇ ಸಂಪರ್ಕಕೊಂಡಿ
ಇನ್ನು ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಈ ನಾಲ್ಕು ರಾಜ್ಯಗಳ ಸಂಪರ್ಕ ಕೊಂಡಿ ಎಂದೆ ಬಿಂಬಿಸಿಕೊಂಡಿರುವ ಹುಬ್ಬಳ್ಳಿಯಲ್ಲಿ ಇಂತಹದೊಂದು ಅವ್ಯವಸ್ಥೆ ತಲೆ ಎತ್ತುತ್ತಿದೆ. ಹುಬ್ಬಳ್ಳಿಯನ್ನು ದಂಧೆಕೋರರು ಹಾಟ್‌ಸ್ಪಾಟ್ ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣ ಸುತ್ತಮುತ್ತಲಿನ ಪ್ರದೇಶದಿಂದ ರೈಲು, ರಸ್ತೆ ಮಾರ್ಗದ ಮೂಲಕ ರಾತ್ರೋರಾತ್ರಿ ಹುಬ್ಬಳ್ಳಿಗೆ ಸಾಗಿಸುತ್ತಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಕೆಜಿ, 5 ಕೆಜಿ, 10 ಕೆಜಿ ಬಂಡಲ್ಗಳಲ್ಲಿ ಗಾಂಜಾ (marijuana) ಸುತ್ತಿಕೊಳ್ಳುತ್ತಾರೆ. ಇದಕ್ಕೆ ಸುಗಂಧ ದ್ರವ್ಯ ಹಾಕಿಕೊಂಡು ಯಾರಿಗೂ ಸಂಶಯ ಬಾರದಂತೆ ಬ್ಯಾಗ್ನಲ್ಲಿ ಇಟ್ಟುಕೊಂಡು ಪ್ರಯಾಣಿಕರ ಸೋಗಿನಲ್ಲಿ ಹುಬ್ಬಳ್ಳಿಗೆ ಬಂದಿಳಿಯುತ್ತಾರೆ. ಮೊದಲೇ ನಿಗದಿಪಡಿಸಿದ ಮಧ್ಯವರ್ತಿಗಳಿಗೆ ಕೊಟ್ಟು ಕಾಲು ಕೀಳುತ್ತಾರೆ. ಹೀಗೆ ಗಾಂಜಾ ಖರೀದಿಸಿದ ಸ್ಥಳೀಯ ಮಧ್ಯವರ್ತಿಗಳು ಕಾರವಾರ, ಗೋವಾ, ಗೋಕರ್ಣದ ಓಂ ಬೀಚ್ ಸೇರಿದಂತೆ ಮತ್ತಿತರ ಪ್ರದೇಶಗಳಿಗೆ ರವಾನಿಸುತ್ತಾರೆ.
ವಿದೇಶಿಯರು ಸಮುದ್ರ ದಡಕ್ಕೆ ಬರುವುದರಿಂದ ನಶಾ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿದ್ದು, ಇದೇ ಕಾರಣಕ್ಕೆ ಹುಬ್ಬಳ್ಳಿಯಿಂದ ವ್ಯವಸ್ಥಿತವಾಗಿ ಗಾಂಜಾ ಪೂರೈಕೆಯಾಗುತ್ತಿದೆ. ಈ ಬಗ್ಗೆ ಹು-ಧಾ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಲು ಮುಂದಾಗಿದೆ.
ಇದನ್ನೂ ಓದಿ:ತಂದೆ ಮಾಡಿದ್ದ ಸಾಲಕ್ಕೆ ಅಪ್ರಾಪ್ತ ಮಗನಿಗೆ ಬ್ಯಾಂಕ್ ನೋಟಿಸ್: ಪ್ರಕರಣ ದಾಖಲಿಸುವಂತೆ ಮಕ್ಕಳ ಆಯೋಗದ ಸೂಚನೆ