ಹುಬ್ಬಳ್ಳಿ :ನಗರದ ವಾರ್ಡ್ ನಂಬರ್ 64ರ ಗೌಸಿಯಾ ಕಾಲೋನಿಯಲ್ಲಿ ಹಾದು ಹೋಗಿರುವ ರಾಜ ಕಾಲುವೆ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಗಬ್ಬೆದ್ದು ನಾರುತ್ತಿದೆ. ಮೂಗು ಮುಚ್ಚಿಕೊಂಡೇ ಇಲ್ಲಿನ ನಿವಾಸಿಗಳು ಬದುಕು ಸಾಗಿಸಬೇಕಾದ ಪ್ರಸಂಗ ಬಂದಿದೆ.
ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿದು ಹೋಗುತ್ತಿರುವುದರಿಂದ ಕಸಕಡ್ಡಿಗಳು, ಪ್ಲಾಸ್ಟಿಕ್ ಮತ್ತು ರಾತ್ರೋರಾತ್ರಿ ತಂದು ಸುರಿಯುವ ತ್ಯಾಜ್ಯ ವಸ್ತುಗಳು ನೀರು ಹರಿದು ಹೋಗಲು ಅಡ್ಡಿಯಾಗುತ್ತವೆ. ಇದರಿಂದಾಗಿ ಸಣ್ಣದಾಗಿ ಮಳೆ ಬಂದರೂ ಕಾಲುವೆ ಕಟ್ಟಿಕೊಂಡು ನೀರು ರಸ್ತೆ ಮೇಲೆ ಹರಿದು ಮನೆಯೊಳಗೆ ನೀರು ನುಗ್ಗುತ್ತಿದೆ.
ಸುಮಾರು ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿರುವ ಇಲ್ಲಿನ ನಿವಾಸಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅದೆಷ್ಟೋ ಬಾರಿ ತಡೆಗೋಡೆ ನಿರ್ಮಿಸುವಂತೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಗೌಸಿಯಾ ನಗರ ಅಷ್ಟೇ ಅಲ್ಲ, ಈ ರಾಜ ಕಾಲುವೆ ಇಬ್ರಾಹಿಂಪುರ, ಎಸ್ ಎಂ ಕೃಷ್ಣ ನಗರದಲ್ಲಿ ಹಾದು ಹೋಗಿದೆ. ದಾರಿಗುಂಟ ಹಲವಾರು ಸಮಸ್ಯೆಗಳನ್ನು ಸೃಷ್ಟಿಸಿದೆ.