ಹುಬ್ಬಳ್ಳಿ:ಕೊರೊನಾ ವೈರಸ್ ಭೀತಿ ಹಿನ್ನೆಲೆ ಲಾಕ್ಡೌನ್ ಘೋಷಣೆಯಾಗಿದ್ದರೂ ರೈತರು ಮಾತ್ರ ಮನೆಯಲ್ಲಿ ಕೂರದೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಇದೀಗ ಮುಂಗಾರು ಆರಂಭವಾಗಿರುವುದರಿಂದ ಕೆಲವೆಡೆ ಬಿತ್ತನೆ ಕಾರ್ಯ ಕೂಡಾ ಆರಂಭಿಸಿದ್ದಾರೆ.
ವಾಡಿಕೆಗಿಂತ ಕಡಿಮೆ ಮಳೆ...ಆಗಸದತ್ತ ಮುಖ ಮಾಡಿದ ಹುಬ್ಬಳ್ಳಿ ರೈತರು - Hubli farmers
ಮುಂಗಾರು ಆರಂಭವಾದರೂ ಹುಬ್ಬಳ್ಳಿಯಲ್ಲಿ ವಾಡಿಕೆಯಷ್ಟು ಮಳೆ ಆಗದೆ ರೈತರು ಕಂಗಾಲಾಗಿದ್ದಾರೆ. ಕೆಲವು ಕಡೆಗಳಲ್ಲಿ ಹೆಸರು ಕಾಳು ಬಿತ್ತನೆ ಮಾಡಲಾಗಿದ್ದು ಮಳೆ ಬರದೆ ಬೆಳೆ ನಾಶವಾಗುವ ಭಯ ರೈತರನ್ನು ಕಾಡುತ್ತಿದೆ.
ಆದರೆ ಹುಬ್ಬಳ್ಳಿಯಲ್ಲಿ ವಾಡಿಕೆಯಷ್ಟು ಮಳೆಯಾಗದಿರುವುದರಿಂದ ಬಿತ್ತನೆಗೆ ಕಾಲ ಕೂಡಿ ಬಂದಿಲ್ಲ. ಜಿಲ್ಲೆಯಲ್ಲಿ ಜೂನ್ 15ರವರೆಗೆ 66 ಮಿಮೀ ಮಳೆಯಾಗಬೇಕಿತ್ತು. ಆದರೆ 61 ಮಿಮೀ ಮಳೆಯಾಗಿದೆ. ಜಿಲ್ಲೆಯಾದ್ಯಂತ ಮಳೆ ಬೀಳದಿರುವುದರಿಂದ ಕೆಲವು ರೈತರಿಗೆ ಬಹಳ ತೊಂದರೆಯಾಗಿದೆ. ನವಲಗುಂದ, ಅಣ್ಣಿಗೇರಿ ತಾಲೂಕಿನ ಕೆಲವು ಕಡೆಗಳಲ್ಲಿ ಹೆಸರುಕಾಳು ಬಿತ್ತನೆಯಾಗಿದ್ದು, ಮಳೆ ಕೊರತೆಯಿಂದ ಬೆಳೆ ನಾಶವಾಗುವ ಆತಂಕ ರೈತರನ್ನು ಕಾಡುತ್ತಿದೆ.
ಜಿಲ್ಲೆಯಲ್ಲಿ 2,46,276 ಹೆಕ್ಟೇರ್ ಬಿತ್ತನೆಯ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ 87,276 ಹೆಕ್ಟೇರ್‌ನಷ್ಟು ಬಿತ್ತನೆಯಾಗಿದೆ. ಮುಂಗಾರು ಬಿತ್ತನೆಗೆ ಇನ್ನೂ ಅವಕಾಶವಿರುವುದರಿಂದ ರೈತರು ಉತ್ತಮ ಮಳೆಗಾಗಿ ಕಾಯುತ್ತಿದ್ದಾರೆ. ಅಲ್ಲದೆ ಕಳೆದ ಮೂರು ತಿಂಗಳಿನಿಂದ ಹೆಚ್ಚಿನ ಕೆಲಸವಿಲ್ಲದೆ, ಕೈಗೆ ಹಣದ ಕೂಡಾ ದೊರೆಯದೆ ರೈತರು ಮಳೆ ಹಾಗೂ ಕೃಷಿ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.