ಹುಬ್ಬಳ್ಳಿ:ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಸದಸ್ಯರ ಆಡಳಿತವನ್ನು ಅವರ ಪತಿ ಅಥವಾ ಇತರ ಪುರುಷ ಸಂಬಂಧಿಕರೇ ನಿರ್ವಹಿಸುತ್ತಿರುವುದು ಬಹಿರಂಗ ಸತ್ಯ. ಈ ಅಪವಾದಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ಹೊರತಾಗಿಲ್ಲ. ಮಹಿಳಾ ಸದಸ್ಯೆಯು ಸಹಿ ಹಾಕಲಷ್ಟೇ ಸೀಮಿತವಾಗಿದ್ದು, ಪುರುಷ ಅಥವಾ ಆಕೆಯ ಸಂಬಂಧಿಕರದ್ದೇ ಪಾಲಿಕೆಯಲ್ಲಿ ದರ್ಬಾರ್ ನಡೆಯುತ್ತಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಶೇ. 50ಕ್ಕೂ ಹೆಚ್ಚು ಸದಸ್ಯೆಯರಿದ್ದರೂ ಇವರಲ್ಲಿ ಹೆಚ್ಚಿನವರ ಅಧಿಕಾರವನ್ನು ಅವರ ಪತಿ ಅಥವಾ ಮಕ್ಕಳು ನಿರ್ವಹಿಸುತ್ತಿದ್ದಾರೆ. ಮೊನ್ನೆ-ಮೊನ್ನೆಯಷ್ಟೆೇ ನಗರದ ಖಾಸಗಿ ಹೋಟೆಲ್ನಲ್ಲಿ ಎಲ್ ಆ್ಯಂಡ್ ಟಿ ಕಂಪನಿಯವರು ಕರೆದಿದ್ದ ನೀರು ಸರಬರಾಜು ನಿರ್ವಹಣೆ ಸಭೆಯಲ್ಲಿ ಪಾಲಿಕೆ ಸದಸ್ಯೆಯರೊಂದಿಗೆ ಅವರ ಪತಿ ಇಲ್ಲವೇ ಮಕ್ಕಳು ಅಥವಾ ತಂದೆ ಭಾಗವಹಿಸಿದ್ದು ಇದಕ್ಕೊಂದು ಸ್ಪಷ್ಟ ನಿದರ್ಶನ.
82 ಪಾಲಿಕೆ ಸದಸ್ಯರನ್ನು ಆ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ, ಸದಸ್ಯೆಯರ ಸಂಬಂಧಿಕರು ಸೇರಿ 115 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಹಿಂದೆಯೂ ಪತಿಯಂದಿರೇ ವಾರ್ಡ್‌ಗಳಲ್ಲಿ ಅಧಿಕಾರ ಚಲಾಯಿಸುತ್ತಿದ್ದರು. ಈ ವ್ಯವಸ್ಥೆ ಈಗಲೂ ಮುಂದುವರಿದಿದೆ. ಕೆಲ ವಾರ್ಡ್‌ಗಳಲ್ಲಿ ಸಾಮಾನ್ಯ ಸಭೆಗಳಿಗೆ ಹಾಜರಾಗುವುದು ಹಾಗೂ ಕಡತಗಳಿಗೆ ಸಹಿ ಮಾಡುವುದಷ್ಟೇ ಸದಸ್ಯೆಯರ ಕಾರ್ಯವಾಗಿ ಉಳಿದುಕೊಂಡಿದೆ.