ಹುಬ್ಬಳ್ಳಿ: ಎರಡೂವರೆ ವರ್ಷಗಳ ಬಳಿಕ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದರೂ ನೂತನ ಕಾರ್ಪೋರೇಟರ್‌ಗಳಿಗೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಹಕ್ಕು ಹೊಂದುವ ಅವಕಾಶದಿಂದ ವಂಚಿತರಾಗುವ ಸಾಧ್ಯತೆಯ ಸಂಶಯ ಶುರುವಾಗಿದೆ.
ಹು-ಧಾ ಪಾಲಿಕೆಯ 82 ಸದಸ್ಯರಿಗೆ ಪರಿಷತ್ ಚುನಾವಣೆಯಲ್ಲಿ ಮತದಾನ ಹಕ್ಕು ಡೌಟು: ಯಾಕೆ ಗೊತ್ತೇ? - ಪಾಲಿಕೆ ಸದಸ್ಯರಿಗೆ ಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕು ಸಿಗೋದು ಅನುಮಾನ?
ಸೆ.3 ರಂದು ನಡೆದಿದ್ದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾಗಿರುವ 82 ಸದಸ್ಯರು ಈವರೆಗೆ ಪ್ರಮಾಣ ವಚನವನ್ನೇ ಸ್ವೀಕರಿಸಿಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಈ ಎಲ್ಲಾ ಸದಸ್ಯರು ಮತದಾನದಿಂದ ವಂಚಿತರಾಗಲಿದ್ದಾರೆಯೇ ಎಂಬ ಅನುಮಾನ ಶುರುವಾಗಿದೆ.
ಸೆ.3 ರಂದು ನಡೆದ ಪಾಲಿಕೆಯ ಸಾರ್ವತ್ರಿಕ ಚುನಾವಣೆಯಲ್ಲಿ 82 ಸದಸ್ಯರು ಆಯ್ಕೆಯಾಗಿದ್ದಾರೆ. ಜನರಿಂದ ಚುನಾಯಿತಗೊಂಡ ಸದಸ್ಯರು ಈವರೆಗೆ ಸದಸ್ಯರಾಗಿ ಪ್ರಮಾಣವಚನವನ್ನೇ ಸ್ವೀಕರಿಸಿಲ್ಲ. ನೂತನ ಪಾಲಿಕೆ ಸದಸ್ಯರು ಪ್ರಮಾಣ ವಚನ ಸ್ವೀಕರಿಸದ ಹಿನ್ನೆಲೆಯಲ್ಲಿ ಡಿಸೆಂಬರ್ 10 ರಂದು ನಡೆಯಲಿರುವ ಪರಿಷತ್ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲ ಸೃಷ್ಟಿಯಾಗಿದೆ. ಈ ರೀತಿಯ ಜಿಜ್ಞಾಸೆ ನಿರ್ಮಾಣವಾಗಿರುವುದು ಇದೇ ಮೊದಲು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರಿಂದ ಚುನಾಯಿತ ಪ್ರತಿನಿಧಿಗಳು ಕೂಡ ಅಸಮಾಧಾನಗೊಂಡಿದ್ದಾರೆ.
ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಹೆಸರು ಸರ್ಕಾರದ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಗೊಂಡಿದೆ. ಅವರೆಲ್ಲ ಇನ್ನೂ ಪ್ರಮಾಣವಚನ ಸ್ವೀಕರಿಸಿಲ್ಲ. ಹಾಗಾಗಿ ಪಾಲಿಕೆಯ ಅಧಿಕೃತ ಸದಸ್ಯರಾಗಿಲ್ಲ. ಪಾಲಿಕೆ ಸಾಮಾನ್ಯ ಸಭೆಯಲ್ಲೇ ಪ್ರತಿಜ್ಞಾವಿಧಿ ಬೋಧಿಸಲಾಗುತ್ತದೆ. ಇದೀಗ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಾಮಾನ್ಯ ಸಭೆ ನಡೆಸುವ ಸಾಧ್ಯತೆಗಳನ್ನು ಸರ್ಕಾರವೇ ನಿರ್ಧರಿಸಬೇಕು ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್ ಹೇಳಿದ್ದಾರೆ.