ಹುಬ್ಬಳ್ಳಿ :ಕೊರೊನಾ ಮಹಾಮಾರಿ ತಡೆಗೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಹೊಸ ತಂತ್ರ ಕಂಡುಕೊಂಡಿದೆ. ನಗರದ ಯುವ ಹಾಗೂ ಉತ್ಸಾಹಿ ಸ್ವಯಂ ಸೇವಕರ ತಂಡ ಕಟ್ಟಿಕೊಂಡು ಕೋವಿಡ್-19 ನಿಯಂತ್ರಣಕ್ಕೆ ಮುಂದಾಗಿದೆ.
ಸೋಂಕು ತಡೆ ಸಲುವಾಗಿ ಧಾರವಾಡ ಜಿಲ್ಲಾಡಳಿತ ಹಾಗೂ ಪಾಲಿಕೆಯೊಂದಿಗೆ ಕೈಜೋಡಿಸುವ ಸಲುವಾಗಿ ಕೋವಿಡ್ ನಿಯಂತ್ರಣಕ್ಕೆ ಸ್ವಯಂ ಸೇವಕರ ತಂಡ ರಚಿಸಲಾಗುತ್ತಿದೆ. ಪಾಲಿಕೆಯ ಎಲ್ಲ ವಾರ್ಡ್ ಮಟ್ಟದ ಕಾರ್ಯಪಡೆಗಳನ್ನು ರಚಿಸಿ, ಜನರಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ, ಜೈವಿಕ ತ್ಯಾಜ್ಯ ವಿಲೇವಾರಿ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು, ಮಾಸ್ಕ್ ಧರಿಸದವರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸುವುದು, ದುರ್ಬಲ ಆರೋಗ್ಯ ಹೊಂದಿದವರಿಗೆ ಇತರ ಚಿಕಿತ್ಸೆ, ಔಷಧಗಳ ಪೂರೈಕೆಗೆ ನೆರವಾಗುವುದು ಮತ್ತಿತರ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವಯಂ ಸೇವಕರನ್ನು ಆಹ್ವಾನಿಸಿದೆ.