ಬೆಂಗಳೂರು/ಧಾರವಾಡ: ರಾಜ್ಯಾದ್ಯಂತ ಸದ್ದು ಮಾಡಿದ ಹಿಜಾಬ್ ವಿವಾದದ ತೀರ್ಪು ಇಂದು ಹೊರ ಬೀಳಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಾಲಾ ಕಾಲೇಜುಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
ಬೆಂಗಳೂರು: ಹಿಜಾಬ್ ವಿವಾದದ ತೀರ್ಪು ಪ್ರಕಟ ಹಿನ್ನೆಲೆ ನಗರದ ಶಾಲಾ - ಕಾಲೇಜುಗಳ ಮುಂದೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ ನಿಷೇಧಾಜ್ಞೆ ಹೊರಡಿಸಲಾಗಿದೆ. ನಗರದ ಬಹುತೇಕ ಶಾಲಾ - ಕಾಲೇಜುಗಳ ಮುಂದೆ ಪೊಲೀಸರು ಬ್ಯಾರಿಕೇಡ್ ಹಾಕಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಭದ್ರತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಅಂತಹವರನ್ನು ಮುಲಾಜಿಲ್ಲದೇ ವಶಕ್ಕೆ ಪಡೆದುಕೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ತಾಕೀತು ಮಾಡಿದ್ದಾರೆ. ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಎಚ್ಚರ ವಹಿಸುವಂತೆ ನಿರ್ದೇಶನ ನೀಡಲಾಗಿದೆ. ಒಟ್ಟಾರೆ ಬೆಂಗಳೂರು ನಗರದಲ್ಲಿ ಶೈಕ್ಷಣಿಕ ಸಂಸ್ಥೆಗಳ ಎದುರು 10 ಸಾವಿರಕ್ಕೂ ಹೆಚ್ಚಿನ ಪೊಲೀಸರನ್ನು ಭದ್ರತೆಗೆ ಕಲ್ಪಿಸಲಾಗಿದೆ.
ಧಾರವಾಡ: ಹುಬ್ಬಳ್ಳಿಯ ವಿವಿಧೆಡೆ ಶಾಲಾ ಕಾಲೇಜುಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಹಿಜಾಬ್ ವಿವಾದ ತೀವ್ರಗೊಂಡಿದ್ದ ಮೂರು ಸಾವಿರ ಮಠ ವಿದ್ಯಾವರ್ಧಕ ಸಂಘದ ಮಹಿಳಾ ಪದವಿ ಕಾಲೇಜು ಬಳಿ ಪೊಲೀಸ್ ಹೈ ಅಲರ್ಟ್ ಇದೆ.
ಕಾಲೇಜು ಬಳಿ ಡಿಎಆರ್ ತುಕಡಿ ನಿಯೋಜನೆ ಮಾಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಜರುಗಿಸಲಾಗಿದೆ. ಈಗಾಗಲೇ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಶಾಲಾ ಕಾಲೇಜುಗಳಲ್ಲಿ ಚಟುವಟಿಕೆಗಳು ಎಂದಿನಂತೆ ಆರಂಭಗೊಂಡಿವೆ.
ಇದನ್ನೂ ಓದಿ:ಹಿಜಾಬ್ ತೀರ್ಪು ಪ್ರಕಟ ಹಿನ್ನೆಲೆ: ಮೈಸೂರು, ಕೊಪ್ಪಳದಲ್ಲಿ 144 ಸೆಕ್ಷನ್ ಜಾರಿ
ಹುಬ್ಬಳ್ಳಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿರುವ ಬೆನ್ನಲ್ಲೇ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಚನ್ನಮ್ಮ ವೃತ್ತದಲ್ಲಿ ಕೆಎಸ್ಆರ್ಪಿ ತುಕಡಿ ಸೇರಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಗರದ ವಿವಿಧೆಡೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಾಗಲೇ ಧಾರವಾಡ ಜಿಲ್ಲಾಡಳಿತ ಜರುಗಿಸಿದ್ದು, ಗುಂಪು ಸೇರದಂತೆ, ಮಾರಕಾಸ್ತ್ರ ಒಯ್ಯದಂತೆ ನಿರ್ಬಂಧ ಹೇರಲಾಗಿದೆ. ಅಲ್ಲದೇ ವಿಜಯೋತ್ಸವ, ಮೆರವಣಿಗೆ ಇತ್ಯಾದಿಗಳ ಮೇಲೆಯೂ ನಿರ್ಬಂಧ ಹಾಕಲಾಗಿದೆ.