ಹುಬ್ಬಳ್ಳಿ(ಧಾರವಾಡ):ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ಹಲವು ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಅಂಡರ್ ಪಾಸ್ ಜಲಾವೃತಗೊಂಡಿದೆ.
ಜಲಾವೃತಗೊಂಡ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಅಂಡರ್ ಪಾಸ್.. ನಿರಂತರ ಮಳೆಗೆಹುಬ್ಬಳ್ಳಿ-ಧಾರವಾಡಅಕ್ಷರಶಃ ತತ್ತರಿಸಿ ಹೋಗಿದೆ. ಎಲ್ಲೆಡೆ ನೀರು ನಿಂತಿದ್ದು, ಜನರು ನೀರಿನಲ್ಲಿಯೇ ಓಡಾಡುವಂತಾಗಿದೆ. ಇನ್ನೂ ರೈಲ್ವೆ ಕೆಳ ಸೇತುವೆಯಲ್ಲಿ ನೀರು ನಿಂತಿರುವ ಪರಿಣಾಮ ಪ್ರಯಾಣಿಕರು ಒಂದು ಪ್ಲಾಟ್ ಫಾರಂನಿಂದ ಮತ್ತೊಂದು ಪ್ಲಾಟ್ ಫಾರಂಗೆ ಹೋಗಲು ಪರದಾಡುವಂತಾಗಿದೆ.
ಇದನ್ನೂ ಓದಿ:ವರುಣನ ಆರ್ಭಟಕ್ಕೆ ದಾವಣಗೆರೆ ಜನ ಕಂಗಾಲು: ಸುರಕ್ಷಿತ ಸ್ಥಳಗಳಿಗೆ ಗ್ರಾಮೀಣರು ಸ್ಥಳಾಂತರ
ಜಿಲ್ಲೆಯಾದ್ಯಂತ ಬಹುತೇಕ ಕಡೆಯಲ್ಲಿ ಕೆರೆಗಳು ಭರ್ತಿಯಾಗಿ ಕೋಡಿ ಹರಿದು, ಹೊಲ, ಮನೆಗಳಿಗೆ ನೀರು ನುಗ್ಗುತ್ತಿದೆ. ಕೆಲವೆಡೆ ಹೊಲಗಳಲ್ಲಿನ ನೀರು ಮನೆಗಳಿಗೆ ನುಗ್ಗಿ ಹಾನಿ ಮಾಡಿವೆ. ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಹಲವಾರು ಮನೆಗಳು ಕುಸಿದಿದ್ದು, ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹುಬ್ಬಳ್ಳಿಯ ಗಣೇಶನಗರ, ವಿದ್ಯಾನಗರದಲ್ಲೂ ಕೂಡ ನೂರಾರು ಮನೆಗಳಿಗೆ ನೀರು ನುಗ್ಗಿ ನಿನ್ನೆ ರಾತ್ರಿಯಿಡೀ ಜನರು ನಿದ್ದೆ ಮಾಡದೇ ನೀರನ್ನು ಹೊರ ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ನಿರಂತರ ಮಳೆ ಹಿನ್ನೆಲೆ ಜನರು ಮತ್ತೊಮ್ಮೆ ಪ್ರವಾಹದ ಭೀತಿಯಲ್ಲಿಯೇ ಜೀವನ ನಡೆಸುವಂತಾಗಿದೆ.