ಹುಬ್ಬಳ್ಳಿ: ಪೊಲೀಸರು ರಾಷ್ಟ್ರದ ಸುರಕ್ಷತೆ, ಶಾಂತಿ ಪಾಲನೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ್ದಾರೆ. ದೇಶ ಪ್ರಗತಿ ಆಗಬೇಕಂದರೆ ಶಾಂತಿ ನೆಲಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಸಿಬ್ಬಂದಿಗೆ ಸಿಹಿ ಸುದ್ದಿ ನೀಡಿದ ಸಿಎಂ ನಗರದ ಹಳೇ ಸಿಎಆರ್ ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಂತಿ ಇದ್ರೆ ಮಾತ್ರ ಪ್ರಗತಿ ಸಾಧ್ಯ. ಹಲವಾರು ದೇಶಗಳಲ್ಲಿ ಆಂತರಿಕೆ ಕ್ಷೋಭೆ, ಭಯೋತ್ಪಾದನೆಯಿಂದ ಪ್ರಗತಿ ಇಲ್ಲ. ಅಲ್ಲಿ ಮನುಷ್ಯರ ಬದುಕು ಬದುಕಾಗಿ ಉಳಿದಿಲ್ಲ. ಎಲ್ಲವೂ ಸರಿ ಇದ್ದಾಗ ನಾವೂ ಹೆಚ್ಚು ಮಹತ್ವ ಕೊಡಲ್ಲ. ಆದ್ರೆ, ಪೊಲೀಸರು ಹಗಲಿರುಳೆನ್ನದೇ ಕೆಲಸ ಮಾಡುತ್ತಿದ್ದಾರೆ. ನಮ್ಮ ಸುರಕ್ಷತೆಗಾಗಿ ಶ್ರಮಿಸುತ್ತಿದ್ದಾರೆ ಎಂದರು.
ಪೊಲೀಸರಿಗೆ ಸರ್ಕಾರದ ಸಹಕಾರ:
ಅವರಿಗೆ ನಮ್ಮ ಸಹಾಯ ಅಗತ್ಯವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು. ಪೊಲೀಸರಿಗೂ ಕುಟುಂಬ ಇದೆ. ಅವರು ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಇಲಾಖೆಗೆ ಎಲ್ಲ ಸವಲತ್ತುಗಳನ್ನು ಕೊಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಸಿಎಂ ತಿಳಿಸಿದರು.
ದಶಕಗಳಿಂದ ನೆನೆಗುದಿಗೆ ಬಿದ್ದ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಅತಿ ಹೆಚ್ಚು ಬಡ್ತಿ ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಹಿರಿಯ ಅಧಿಕಾರಿಗಳು ಅಷ್ಟೇ ಅಲ್ಲ, ಕೆಳಹಂತದ ಅಧಿಕಾರಿಗಳಿಗೂ ಬಡ್ತಿ ನೀಡಲಾಗಿದೆ. 16 ಸಾವಿರ ಪೊಲೀಸ್ ಸಿಬ್ಬಂದಿ ನೇಮಕಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರಿಗೆ ಆರೋಗ್ಯ ಭಾಗ್ಯ ವ್ಯವಸ್ಥೆ ಕಲ್ಪಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ವೇತನ ಪರಿಷ್ಕರಣೆ ಬಗ್ಗೆಯೂ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಬೊಮ್ಮಾಯಿ ಅವರು ಪೊಲೀಸ್ ಸಿಬ್ಬಂದಿಗೆ ಅಭಯ ನೀಡಿದರು.
ಇದನ್ನೂ ಓದಿ:ಜನರ ಮನಸ್ಸು ಗೆಲ್ಲಬೇಕು, ವೈಯಕ್ತಿಕ ನಿಂದನೆ ಸರಿಯಲ್ಲ: ಸಿಎಂ ಬೊಮ್ಮಾಯಿ
ಇತ್ತೀಚೆಗೆ ನಮ್ಮ ಯುವಕರು ಆನ್ಲೈನ್ ಗೇಮಿಂಗ್ನಲ್ಲಿ ಹಣ ಕಳೆದುಕೊಂಡು ಜೀವ ಕಳೆದುಕೊಂಡಿದ್ದಾರೆ. ಅದಕ್ಕಾಗಿ ನಾವು ಕಾನೂನು ತಿದ್ದುಪಡಿ ಮೂಲಕ ಬಿಗಿಯಾದ ಕ್ರಮ ಕೈಗೊಂಡಿದ್ದೇವೆ. ಇದಕ್ಕೆ ಹಲವಾರು ಒತ್ತಡಗಳು ಬಂದವು. ಆದ್ರೆ ಒತ್ತಡಗಳಿಗೆ ನಾವು ಮಣಿದಿಲ್ಲ. ಕೋಟಿಗಟ್ಟಲೇ ಜೂಜಾಟ ಆಡಿ 500 ರೂಪಾಯಿ ದಂಡ ಕಟ್ಟಿ ಹೊರ ಬರುತ್ತಾರೆ. ಅದಕ್ಕಾಗಿ ಕಾನೂನು ಬಿಗಿಗೊಳಿಸಲಾಗಿದೆ. ಇಡೀ ದೇಶದಲ್ಲಿ ಕ್ರೈಂ ಸೀನ್ ವ್ಯವಸ್ಥೆ ಮೊದಲ ಬಾರಿಗೆ ಜಾರಿ ಮಾಡಿದ್ದೇವೆ. ಪೊಲೀಸ್ ಸಿಬ್ಬಂದಿಗೆ ವಸತಿ ಮನೆಗಳನ್ನು ಕಟ್ಟಿದ್ದೇವೆ. ಮುಂದೆ ಇನ್ನೂ 10 ಸಾವಿರ ವಸತಿ ವ್ಯವಸ್ಥೆ ಮಾಡಲಿದ್ದೇವೆ ಎಂದರು.
ಪೊಲೀಸರು ಜನಸ್ನೇಹಿಯಾಗಬೇಕು:
ಪೊಲೀಸರು ಜನಸ್ನೇಹಿ ಆಗಬೇಕು. ಸಾರ್ವಜನಿಕರಿಗೆ ನ್ಯಾಯವನ್ನು ಒದಗಿಸುವ ವ್ಯವಸ್ಥೆ ಆಗಬೇಕು. ಹೆಣ್ಣು ಮಕ್ಕಳಿಗೆ ಸುರಕ್ಷತೆ ನೀಡಲು ಪ್ರತಿ ಕಾಲೇಜಿನಲ್ಲಿ ಮಹಿಳಾ ರಕ್ಷಣಾ ವ್ಯವಸ್ಥೆ ಮಾಡುತ್ತಿದ್ದೇವೆ. ಎಲ್ಲ ರಂಗಗಳಿಗೂ ಪೊಲೀಸರ ಪಾತ್ರ ಅವಶ್ಯವಾಗಿದೆ. ಅವರಿಗೆ ನಾವು ಸಹಕಾರ, ಪ್ರೋತ್ಸಾಹ ನೀಡಬೇಕಾಗಿದೆಯೆಂದರು.