ಹುಬ್ಬಳ್ಳಿ :ಸರ್ಕಾರ ಅನುಮತಿ ನೀಡಿದಲ್ಲಿ ಬಸ್ಗಳನ್ನು ರಸ್ತೆಗಿಳಿಸಲು ಸಾರಿಗೆ ಸಂಸ್ಥೆ ಸಕಲ ರೀತಿ ಸಜ್ಜಾಗಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿ ಆರೋಗ್ಯದ ದೃಷ್ಟಿಯಿಂದ ಲಸಿಕೆ ಪಡೆದಿರುವ ಸಿಬ್ಬಂದಿಗೆ ಮಾತ್ರ ಕರ್ತವ್ಯ ನಿಯೋಜನೆ ಮಾಡಲಾಗುತ್ತದೆ. ಎರಡು ಡೋಸ್ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.
ಸಾರಿಗೆ ನೌಕರರು ಅದರಲ್ಲೂ ಮುಖ್ಯವಾಗಿ ಚಾಲಕರು, ನಿರ್ವಾಹಕರು ಮತ್ತು ಬಸ್ ನಿಲ್ದಾಣಗಳ ಸಾರಿಗೆ ನಿಯಂತ್ರಕರು ಕೆಲಸ ನಿರ್ವಹಿಸುವಾಗ ನಿತ್ಯವೂ ವಿವಿಧ ಸ್ಥರದ ಸಾವಿರಾರು ಜನರೊಂದಿಗೆ ನೇರ ಸಂಪರ್ಕಕ್ಕೆ ಬರಬೇಕಾಗುತ್ತದೆ. ಈ ಹಿನ್ನೆಲೆ ಸಂಸ್ಥೆಯ ಸಿಬ್ಬಂದಿಗೆ ಲಸಿಕೆ ಕಡ್ಡಾಯ ಮಾಡಲಾಗಿದೆ.
ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಒಟ್ಟು 2216 ನೌಕರರಿದ್ದಾರೆ. ಅವರಲ್ಲಿ 1500ಕ್ಕೂ ಹೆಚ್ಚು ಚಾಲಕರು ಹಾಗೂ ನಿರ್ವಾಹಕರುಗಳಿದ್ದಾರೆ. ಅವರ ಪೈಕಿ ಶೇ.92ರಷ್ಟು ಮಂದಿ ಈಗಾಗಲೇ ಮೊದಲನೇ ಡೋಸ್ ಪಡೆದಿದ್ದಾರೆ. ಕೆಲವರು 2ನೇ ಡೋಸ್ ಪಡೆದಿದ್ದಾರೆ. ಇನ್ನುಳಿದವರು ಕೂಡಲೇ ಲಸಿಕೆ ಪಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಸೂಚಿಸಿದ್ದಾರೆ.
ಕೋವಿಡ್ ಪೂರ್ವದಲ್ಲಿ ಬಸ್ ಸಂಚಾರ ಹೇಗಿತ್ತು?
ಹುಬ್ಬಳ್ಳಿ ಗ್ರಾಮಾಂತರ :ವಿಭಾಗದಲ್ಲಿ 51 ಸಾಮಾನ್ಯ, ವೇಗದೂತ, ರಾಜಹಂಸ, ಸ್ಲೀಪರ್ ಮತ್ತು ವೋಲ್ವೋ ಸೇರಿ ಒಟ್ಟು 470 ಬಸ್‌ಗಳಿವೆ. ಕೋವಿಡ್ ಪೂರ್ವದಲ್ಲಿ 156 ಸಾಮಾನ್ಯ, 219 ವೇಗದೂತ, 10 ರಾಜಹಂಸ, 10 ವೋಲ್ವೊ, 10 ಎಸಿ ಸ್ಲೀಪರ್ ಮತ್ತು 14 ನಾನ್ ಎಸಿ ಸ್ಲೀಪರ್ ಸಾರಿಗೆ ಬಸ್ ಸೇರಿ ನಿತ್ಯ 419 ಬಸ್‌ಗಳು ಸಂಚರಿಸುತ್ತಿದ್ದವು. 1.35ರಿಂದ 1.50 ಲಕ್ಷ ಕಿ.ಮೀ. ಕ್ರಮಿಸುತ್ತಿದ್ದವು.
ಒಂದು ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದರು. ಸಂಸ್ಥೆಗೆ 45 ರಿಂದ 50 ಲಕ್ಷ ರೂ.ಗಳಷ್ಟು ಸಾರಿಗೆ ಆದಾಯ ಸಂಗ್ರಹವಾಗುತ್ತಿತ್ತು. ಸರಕಾರದ ನಿರ್ದೇಶನಗಳು ಬಂದ ನಂತರ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಯಾವ ಯಾವ ಮಾರ್ಗಗಳಲ್ಲಿ ಯಾವ ಸಾರಿಗೆ ವರ್ಗದ ಬಸ್‌ಗಳನ್ನು ರಸ್ತೆಗಿಳಿಸಬೇಕು ಎಂದು ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದರು.
ಮುನ್ನೆಚ್ಚರಿಕೆ ಕ್ರಮ :ಮುನ್ನೆಚ್ಚರಿಕೆ ಕ್ರಮವಾಗಿ ವಿಭಾಗೀಯ ಕಚೇರಿ, ಬಸ್ ಡಿಪೋಗಳು, ಹಳೆ ಬಸ್ ನಿಲ್ದಾಣ, ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಮತ್ತು ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ, ನವಲಗುಂದ, ಅಣ್ಣಿಗೇರಿ, ಕಲಘಟಗಿ ಬಸ್ ನಿಲ್ದಾಣ ಸೇರಿದಂತೆ ವಿಭಾಗದ ವ್ಯಾಪ್ತಿಯ ಬಸ್ ನಿಲ್ದಾಣಗಳಲ್ಲಿ ಸ್ಯಾನಿಟೈಸೇಷನ್ ಮಾಡಲಾಗಿದೆ. ಬಸ್ ಮತ್ತು ಬಸ್ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಸರ್ಕಾರದ ನಿರ್ದೇಶನಗಳ ಪ್ರಕಾರ ಬಸ್ಗಳಲ್ಲಿ ನಿಗದಿಪಡಿಸಿದ ಸಂಖ್ಯೆಯಷ್ಟು ಜನರು ಮಾತ್ರ ಪ್ರಯಾಣಿಸಲು ಅನುಮತಿಸಲಾಗುತ್ತದೆ. ಕೋವಿಡ್ ನಿಯಮಾವಳಿಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಸಾರ್ವಜನಿಕರು ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅಂತರಾಜ್ಯ ಮತ್ತು ರಾತ್ರಿ ಸಾರಿಗೆ ಬಸ್ ಸಂಚಾರ :ಕೋವಿಡ್ ಪೂರ್ವದಲ್ಲಿ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮುಂತಾದ ಅಂತರ ರಾಜ್ಯಗಳಿಗೆ ವೋಲ್ವೋ, ಸ್ಲೀಪರ್, ರಾಜಹಂಸ ಮತ್ತು ವೇಗದೂತ ಸಾರಿಗೆಗಳು ಸೇರಿ ಹುಬ್ಬಳ್ಳಿಯಿಂದ 65 ಬಸ್‌ಗಳು ನೆರೆಯ ರಾಜ್ಯಗಳಿಗೆ ಸಂಚರಿಸುತ್ತಿದ್ದವು.
ಅವುಗಳಲ್ಲಿ ಅತೀ ಹೆಚ್ಚು 38 ಬಸ್‌ಗಳು ಮಹಾರಾಷ್ಟ್ರ ರಾಜ್ಯಕ್ಕೆ ಹೋಗಿ ಬರುತ್ತಿದ್ದವು. ಅಂತಾರಾಜ್ಯ ಸಾರಿಗೆಗಳಲ್ಲಿ ಬಹಳಷ್ಟು ರಾತ್ರಿ ಸಾರಿಗೆಗಳಾಗಿವೆ. ರಾತ್ರಿ ಕರ್ಫ್ಯೂ ಮತ್ತು ಅಂತಾರಾಜ್ಯಗಳಿಗೆ ಅನುಮತಿ ನಿರ್ದೇಶನಗಳನ್ನು ಆಧರಿಸಿ ಈ ಬಸ್ಗಳ ಸಂಚಾರ ಆರಂಭಿಸುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.