ಹುಬ್ಬಳ್ಳಿ: ಕಲಘಟಗಿಯ ಕಾಡಂಚಿನ ಪ್ರದೇಶ ಗೌಳಿ ದಡ್ಡಿ. ಇಲ್ಲಿನ ಮಕ್ಕಳು ಶಿಕ್ಷಣ ಕಲೆಯಬೇಕು ಅಂದರೆ ಬಹುದೊಡ್ಡ ಸಾಹಸವನ್ನೇ ಮಾಡಬೇಕಾಗಿದೆ. ಅಲ್ಲದೇ ಇಲ್ಲಿನ ಶಾಸಕರ ಹಾಗೂ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಸರಿಯಾದ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಇಲ್ಲದೆ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೇರೆ ಊರಿಗೆ ಹೋಗಬೇಕು ಅಂದ್ರು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಕಾಡಿನ ಮಧ್ಯದಲ್ಲಿ ನಡೆದುಕೊಂಡು ಹೋಗಬೇಕು. ಕಾಡು ಪ್ರಾಣಿಗಳ ಹಾವಳಿಯಿಂದ ಕಲಿಕೆಯೇ ಬೇಡವೆಂದು ಕುಟುಂಬಸ್ಥರ ಆಗ್ರಹದ ಮೇರೆಗೆ ಎಷ್ಟೋ ಪ್ರತಿಭೆಗಳ ಕನಸು ಗುಡಿಸಲಿನಲ್ಲಿಯೇ ಕಮರಿಹೋಗಿದೆ.
ದೇಶ ಆಧುನಿಕತೆಯತ್ತ ಮುಂದುವರೆದಿದ್ದರೂ ಇಲ್ಲಿನ ಜನರ ಸಮಸ್ಯೆ ಮಾತ್ರ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು ಕೇವಲ ಪುಸ್ತಕದ ಗಾದೆಯಾಗಿಯೇ ಉಳಿದಿವೆ. ಹೀಗಿದ್ದರೂ ಕೂಡ ಯಾವುದೇ ಜನಪ್ರತಿನಿಧಿಗಳಾಗಲಿ ಶಾಸಕರಾಗಲಿ ಯಾವುದೇ ಸೌಲಭ್ಯ ಕಲ್ಪಿಸದೆ ಇಲ್ಲಿನ ಜನರ ಬಗ್ಗೆ ನಿಷ್ಕಾಳಜಿ ತೋರುತ್ತಿದ್ದಾರೆ. ಅಲ್ಲದೆ ವೋಟ್ ಬ್ಯಾಂಕ್ ರೀತಿಯಲ್ಲಿ ಚುನಾವಣೆ ಮಾತ್ರವೇ ಈ ಗೌಳಿ ದಡ್ಡಿಯ ಗ್ರಾಮವನ್ನು ನೆನಪಿಸಿಕೊಳ್ಳುತ್ತಾರೆ ಅನ್ನೋದು ಇಲ್ಲಿನ ಜನರ ಆರೋಪವಾಗಿದೆ.