ಹುಬ್ಬಳ್ಳಿ : ನಗರದ ಸಬ್ಜೈಲ್ ಮುಂದೆ ಎರಡು ಗುಂಪುಗಳ ನಡುವೆ ಹಾಡಹಗಲೇ ಗ್ಯಾಂಗ್ ವಾರ್ ನಡೆದಿದೆ. ಗುಂಪುಗಳು ತಲ್ವಾರ್, ಮಚ್ಚು ಹಿಡಿದುಕೊಂಡು ಹೊಡೆದಾಡಿಕೊಂಡಿವೆ.
ವಿಶ್ವೇಶ್ವರ ನಗರದಲ್ಲಿರುವ ಸಬ್ ಜೈಲ್ನಲ್ಲಿದ್ದ ವ್ಯಕ್ತಿಯನ್ನು ನೋಡಲು ಬಂದಿದ್ದ ಟೀಂ ಮೇಲೆ ಮತ್ತೊಂದು ಗ್ಯಾಂಗ್ ಅಟ್ಯಾಕ್ ಮಾಡಿದೆ. ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿವೆ. ಅಲ್ಲದೆ ಒಂದು ಮಾರುತಿ ಸಿಯಾಜ್ ಕಾರು ಸಂಪೂರ್ಣ ಜಖಂಗೊಂಡಿದೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ. ಈ ಹಿಂದೆ ಕ್ಷುಲ್ಲಕ ಕಾರಣಕ್ಕಾಗಿ ಬಂಧನವಾಗಿದ್ದ ಅಪರಾಧಿಗಳನ್ನು ನೋಡಲು ಬಂದಿದ್ದ ಸೂರಿ ಎಂಬಾತನ ಕಡೆಯವರ ಮೇಲೆ ಏಕಾಏಕಿ ಹಲ್ಲೆ ಮಾಡಲಾಗಿತ್ತಂತೆ. ಕಳೆದ ವಾರ ಸೆಟ್ಲ್ಮೆಂಟ್ನ ಶ್ಯಾಮ್ ಜಾಧವ್ ಹಾಗೂ ಇಮ್ರಾನ್ ಎಂಬವನ ಕಡೆಯ ಯುವಕರು, ಹಳೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ಇಮ್ರಾನ್ ಬಿಜಾಪುರ ಎಂಬ ಯುವಕನಿಗೆ ಚಾಕು ಇರಿದಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿ, ಸೂರಿ ಎಂಬವರನ್ನು ಬಂಧಿಸಿ ಉಪಕಾರಾಗೃಹದಲ್ಲಿ ಇಡಲಾಗಿತ್ತು.
ಸಬ್ಜೈಲ್ ಮುಂದೆ ಎರಡು ಗುಂಪಿನ ನಡುವೆ ಗ್ಯಾಂಗ್ ವಾರ್ ಗಿರಿ, ಸೂರಿಯನ್ನು ನೋಡಲು ಹತ್ತಕ್ಕೂ ಹೆಚ್ಚು ಜನ ಇಂದು ಜೈಲ್ ಕಡೆ ಬಂದಿದ್ದರು. ವಿಷಯ ತಿಳಿದ ಇಮ್ರಾನ್ ಕಡೆಯವರು, ಸ್ಕೆಚ್ ಹಾಕಿ ಹಲ್ಲೆ ನಡೆಸಿದ್ದಾರೆ. ರವಿ ಮತ್ತು ಜುನೈದ್ ಮುಲ್ಲಾ ಸೇರಿ ಸುಮಾರು ಹದಿನೈದು ಜನರ ಮೇಲೆ ಅಟ್ಯಾಕ್ ಮಾಡಲಾಗಿದೆ. ಚಂದ್ರು ಗಡಗಿ, ಗಣೇಶ್ ಜಾಧವ್ ಸೇರಿ ಇಪ್ಪತ್ತೈದು ಜನರ ತಂಡ ಅಟ್ಯಾಕ್ ಮಾಡಿದೆ ಎನ್ನಲಾಗಿದೆ.
ಘಟನೆಗೆ ಹಳೆ ದ್ವೇಷವೇ ಕಾರಣ ಎನ್ನಲಾಗಿದ್ದು, ಗಾಯಾಳುಗಳನ್ನು ಕಿಮ್ಸ್ಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅಶೋಕನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.