ಹುಬ್ಬಳ್ಳಿ:ರಾಜ್ಯದಲ್ಲಿಯೇ ಶಿಸ್ತಿನ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಹೆಸರುವಾಸಿಯಾಗಿರುವ ಹು - ಧಾ ಪೊಲೀಸ್ ಕಮಿಷನರೇಟ್ ಈಗ ಅಪರೂಪದ ಪ್ರಕರಣದಲ್ಲಿ ಪೊಲೀಸರೇ ಪೊಲೀಸರನ್ನು ವಶಕ್ಕೆ ಪಡೆದಿದ್ದಾರೆ. ಅಕ್ಷಯ ಕಾಲೋನಿಯ ಮನೆಯೊಂದರಲ್ಲಿ ಕುಳಿತು ಇಸ್ಪೀಟ್ ಆಡುತ್ತಿದ್ದ ಪೊಲೀಸ್ ಸಿಬ್ಬಂದಿ ತಂಡದ ಮೇಲೆ ಪೊಲೀಸರೇ ದಾಳಿ ನಡೆಸಿ, ನಾಲ್ವರನ್ನು ಬಂಧಿಸಿದ್ದಾರೆ.
ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಇನ್ಸ್ಪೆಕ್ಟರ್, ಇಬ್ಬರು ಹೆಡ್ ಕಾನ್ಸ್ಟೇೆಬಲ್, ಓರ್ವ ಕಾನ್ಸ್ಟೇಬಲ್ ಹಾಗೂ ನಿವೃತ್ತ ಹೆಡ್ ಕಾನ್ಸ್ಟೇಬಲ್ ಒಳಗೊಂಡ ಐವರ ತಂಡ ಅಕ್ಷಯ ಕಾಲೋನಿ ಎರಡನೇ ಹಂತದ ಮನೆ ಸಂಖ್ಯೆ 337ರಲ್ಲಿ ಇಸ್ಪೀಟ್ ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ, ಪೊಲೀಸ್ ಆಯುಕ್ತ ಲಾಭೂರಾಮ ಅವರ ಸೂಚನೆ ಮೇರೆಗೆ ಗೋಕುಲ ರೋಡ್ ಠಾಣೆ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ನೇತೃತ್ವದ ತಂಡ ದಾಳಿ ನಡೆಸಿತ್ತು.