ಧಾರವಾಡ: ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳ ನಿಯಂತ್ರಣಕ್ಕೆ ಧಾರವಾಡ ಯುವಕರು ಮುಂದಾಗಿದ್ದಾರೆ. ರಾತ್ರಿ ಹೊತ್ತು ಮಹಿಳೆಯರಿಗೆ ಉಚಿತ ಆಟೋ ಸೇವೆ ನೀಡಲು ಆಟೋ ರಕ್ಷಾ ಯೋಜನೆ ಜಾರಿಗೊಳಿಸಿದ್ದಾರೆ.
ಹೌದು, ಹುಬ್ಬಳ್ಳಿ ಧಾರವಾಡದಲ್ಲಿ ರಾತ್ರಿ ಹೊತ್ತು ಮಹಿಳೆಯರು ಇದರ ಸದುಪಯೋಗ ಮಾಡಿಕೊಳ್ಳಬಹುದಾಗಿದೆ. ಭಿನ್ನವಾದ ಬಣ್ಣ ಹೊಂದಿರುವ ಈ ಆಟೋ ನೋಡೋಕೆ ತುಂಬಾನೆ ವಿಶೇಷವಾಗಿದೆ. ಈ ಆಟೋ ಇದೀಗ ಅವಳಿ ನಗರದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲು ಸಿದ್ಧವಾಗಿ ನಿಂತಿದೆ.
ಆಟೋ ರಕ್ಷಾ ಫೌಂಡೇಶನ್:
ಧಾರವಾಡದಲ್ಲಿ ಕೆಲ ಯುವಕರು ಸೇರಿಕೊಂಡು ಆಟೋ ರಕ್ಷಾ ಎಂಬ ಫೌಂಡೇಶನ್ ಹುಟ್ಟುಹಾಕಿದ್ದು, ರಾತ್ರಿ ಹೊತ್ತಿನಲ್ಲಿ ಮಹಿಳೆಯರಿಗೆ ಉಚಿತ ಸೇವೆ ನೀಡುತ್ತಿದ್ದಾರೆ. ಕೇವಲ ಆಟೋ ಸೇವೆ ಮಾತ್ರವಲ್ಲ, ಶಾಲಾ - ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಪಾಠ ಸಹ ಮಾಡುತ್ತಿದ್ದಾರೆ.