ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಹುಬ್ಬಳ್ಳಿ ನಗರ ಹೊರತುಪಡಿಸಿ ಗ್ರಾಮೀಣ ಭಾಗದಲ್ಲಿ ಲಾಕ್‌ಡೌನ್ ಕೊಂಚ ಸಡಿಲಿಕೆಯಾದ ಪರಿಣಾಮ ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ.
ಚುರುಕುಗೊಂಡ ಕೃಷಿ ಕೆಲಸ; ಜಮೀನು ಹಸನು ಮಾಡುವಲ್ಲಿ ರೈತರು ಬ್ಯುಸಿ
ಲಾಕ್ಡೌನ್ನಿಂದಾಗಿ ಹಣದ ಕೊರತೆ ಎದುರಾಗಿದೆ. ಗೊಬ್ಬರ ಹಾಗೂ ಬಿತ್ತನೆ ಬೀಜಗಳ ಬೆಲೆ ಇಳಿಕೆ ಮಾಡುವಂತೆ ರೈತರು ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಹಾಟ್‌ಸ್ಪಾಟ್ ಪ್ರದೇಶ ಹೊರತುಪಡಿಸಿ ಉಳಿದೆಲ್ಲೆಡೆ ಕೃಷಿ ಸೇರಿದಂತೆ ವಿವಿಧ ಚಟುವಟಿಕೆಗೆ ಸಡಿಲಿಕೆ ನೀಡಿರುವುದು ಜಿಲ್ಲೆಯ ರೈತಾಪಿ ವರ್ಗ ಕೊಂಚ ನಿರಾಳವಾಗಿದೆ. ಈಗಾಗಲೇ ಅನೇಕರು ಭೂಮಿ ಹದ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಮುಂಗಾರು ಬಿತ್ತನೆಗೆ ಶೇಂಗಾ, ಹೆಸರು, ಅಲಸಂದೆ, ಮಡಿಕೆ, ಉದ್ದು, ನವಣೆ ಸೇರಿದಂತೆ ವಿವಿಧ ಬೆಳೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ರೈತರು ತಮ್ಮ ಚಕ್ಕಡಿ, ಟ್ರ್ಯಾಕ್ಟರ್ಗಳಲ್ಲಿ ಜಮೀನುಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು. ಈಗಾಗಲೇ ಕೃಷಿ ಯಂತ್ರೋಪಕರಣಗಳು, ಬೀಜ-ಗೊಬ್ಬರ ಮತ್ತು ಔಷಧಗಳ ಖರೀದಿಯಲ್ಲಿ ರೈತರು ಮಗ್ನರಾಗಿದ್ದಾರೆ. ಲಾಕ್ಡೌನ್ನಿಂದಾಗಿ ಹಣದ ಕೊರತೆ ಎದುರಾಗಿದೆ. ಗೊಬ್ಬರ ಹಾಗೂ ಬಿತ್ತನೆ ಬೀಜಗಳ ಬೆಲೆ ಇಳಿಕೆ ಮಾಡುವಂತೆ ರೈತರು ಮನವಿ ಮಾಡಿದ್ದಾರೆ. ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಮಳೆರಾಯ ರೈತರ ಕೈ ಹಿಡಿಯಬೇಕಿದೆ.