ಧಾರವಾಡ:ಪತಿರಾಯ, ತನ್ನ ಮಗುವನ್ನು ತೆಗೆದುಕೊಂಡು ಹೋದನೆಂದು ಕಣ್ಣೀರು ಹಾಕುತ್ತಿದ್ದ ತಾಯಿ ಈಗ ನಿಟ್ಟುಸಿರು ಬಿಟ್ಟಿದ್ದಾಳೆ. ನಾನಾ ರೀತಿಯ ಹರಸಾಹಸದ ಬಳಿಕ ಮಗು ತನ್ನ ತಾಯಿಯ ಮಡಿಲು ಸೇರಿಕೊಂಡಿದೆ.
ಹೌದು, ಮೂಲತಃ ಧಾರವಾಡದ ನಿವಾಸಿಯಾದ ಮಹಿಳೆಯೊಬ್ಬರು ಕಳೆದ ಕೆಲ ದಿನಗಳ ಹಿಂದೆ ತನ್ನ ಪತಿ ಝಯೀನ್ ಅಡ್ಡೆವಾಲೆ, ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ. ಆ ಮಗು ನನಗೇ ಬೇಕು ಎಂದು ಕಣ್ಣೀರು ಹಾಕುತ್ತಾ ಪತಿಯ ಮನೆಯ ಎದುರು ಪ್ರತಿಭಟನೆ ಕೂಡಾ ನಡೆಸಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಈಗ ಝಯೀನ್ ಕುಟುಂಬವನ್ನು ಪತ್ತೆ ಮಾಡಿ ಮಗುವನ್ನು ಕರೆತಂದು ತಾಯಿಯ ಮಡಿಲು ಸೇರಿಸಿದ್ದಾರೆ.
ಮರಳಿ ತಾಯಿಯ ಮಡಿಲು ಸೇರಿದ ಕಂದಮ್ಮ ಫೇಸ್ಬುಕ್ನಲ್ಲಿ ಲವ್... ಮದುವೆ ಬಳಿಕ ಮಗುವಿನೊಂದಿಗೆ ಗಂಡ ಪರಾರಿ!
ಘಟನೆ ಹಿನ್ನೆಲೆ:
ಫೇಸ್ಬುಕ್ನಲ್ಲಿ ಪರಿಚಯವಾದ ಝಯೀನ್ ಅಡ್ಡೆವಾಲೆ ಎಂಬಾತನನ್ನ ಪ್ರೀತಿಸಿ, ಕೆಲಸವಿಲ್ಲದೆ ತಿರುಗುತ್ತಿದ್ದ ಆತನಿಗೆ ಕೈ ತುಂಬಾ ಸಂಬಳ ಬರುವ ಕೆಲಸಾನೂ ಕೊಡಿಸಿ ಮದುವೆನೂ ಆಗಿದ್ದಳು. ಆದರೆ ಮದವೆಯಾಗಿ ಮಗುವಾದ ಬಳಿಕ ಆತನ ಅಸಲಿ ಮುಖ ಬಯಲಾಗಿತ್ತು. ಆಕೆಗೆ ವರದಕ್ಷಿಣೆ ಕಿರುಕುಳ ನೀಡಲು ಪ್ರಾರಂಭಿಸಿದ ಝಯೀನ್ಗೆ ಈ ಹಿಂದೆಯೇ ಎರಡು ಮದುವೆಯಾಗಿದೆ ಎಂಬ ವಿಷಯವೂ ಬೆಳಕಿಗೆ ಬಂದಿತ್ತು. ಬಳಿಕ ಆತ ಮಗುವನ್ನು ತೆಗೆದುಕೊಂಡು ಪರಾರಿಯಾಗಿದ್ದ ಎನ್ನಲಾಗಿದೆ.
ಒಟ್ಟಾರೆ ಫೇಸ್ಬುಕ್ ಮೂಲಕ ಶುರುವಾದ ಪ್ರೀತಿ ಈ ರೀತಿ ಯುವತಿ ಬದುಕಿಗೆ ಮುಳ್ಳಾಗಿತ್ತು. ಇದೀಗ ಮಗು ತನ್ನ ತಾಯಿಯ ಮಡಿಲು ಸೇರಿದ್ದು, ಮಗುವನ್ನು ಮುದ್ದಾಡುತ್ತಾ ತಾಯಿ ನೋವನ್ನು ಮರೆಯುತ್ತಿದ್ದಾಳೆ.