ಹುಬ್ಬಳ್ಳಿ:ಟ್ರಾಫಿಕ್..ಟ್ರಾಫಿಕ್..ಟ್ರಾಫಿಕ್... ಇದು ಅವಳಿನಗರ ಹುಬ್ಬಳ್ಳಿ ಜನರ ಗೋಳು. ಹೌದು, ಇಲ್ಲಿ ನಿತ್ಯ ಉಂಟಾಗುವ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಅದರಲ್ಲೂ ಹಬ್ಬದ ದಿನಗಳಲ್ಲಿ ಹೇಳುವುದೇ ಬೇಡ. ಇದರಿಂದಾಗಿ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಸಾರ್ವಜನಿಕರೊಂದಿಗೆ ಸಹಕರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸಂಚಾರ ದಟ್ಟಣೆಯಿಂದ ಜನ ಹೈರಾಣ - Traffic police
ಹುಬ್ಬಳ್ಳಿಯಲ್ಲಿ ಉಂಟಾಗುವ ಸಂಚಾರ ದಟ್ಟಣೆಯಿಂದ ಸವಾರರು ಹೈರಾಣಾಗಿದ್ದು, ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಆಯುಧ ಪೂಜೆ ಹಾಗೂ ವಿಜಯ ದಶಮಿ ಪ್ರಯುಕ್ತ ಪೂಜಾ ಸಾಮಗ್ರಿ ಸೇರಿದಂತೆ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ನಗರಕ್ಕೆ ಸುತ್ತಮುತ್ತಲ ಪ್ರದೇಶಗಳ ಜನರು ಆಗಮಿಸುತ್ತಾರೆ. ಈ ಹಿನ್ನೆಲೆ ಮಾರುಕಟ್ಟೆ ಸುತ್ತಮುತ್ತ ವಾಹನ ನಿಲುಗಡೆಗೆ ಜಾಗವೇ ಇಲ್ಲದಂತಾಗಿದೆ. ಹೀಗಿದ್ದರೂ ಸಂಚಾರಿ ಪೊಲೀಸರು ತೆರವುಗೊಳಿಸದ ಕಾರಣ ಒತ್ತೊತ್ತಾಗಿ ಜೋಡಿಸಿದ ಬೆಂಕಿ ಕಡ್ಡಿಗಳಂತೆ ದಟ್ಟಣೆ ಉಂಟಾಗುತ್ತದೆ. ಹೀಗಾದರೆ ಹೇಗೆ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.
ತರಕಾರಿ, ಹೂ-ಹಣ್ಣುಗಳ ಬೆಲೆ ಗಗನಕ್ಕೆ ಏರಿದೆ. ಈ ಸಂದರ್ಭದಲ್ಲಿ ಪೊಲೀಸರೂ ದಂಡ ವಿಧಿಸುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ದಟ್ಟಣೆ ಉಂಟಾದಾಗ ಮಾರುಕಟ್ಟೆ ಒಳಹೊಕ್ಕಲು ಸಾಧ್ಯವಿಲ್ಲ. ವಾಹನಗಳನ್ನು ರಸ್ತೆ ಬದಿಯೇ ನಿಲ್ಲಿಸುತ್ತೇವೆ. ಅವುಗಳನ್ನು ಪೊಲೀಸರು ಟೋಯಿಂಗ್ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತದೆ. ಮೊದಲು ವಾಹನ ದಟ್ಟಣೆ ನಿಯಂತ್ರಣ, ಪಾರ್ಕಿಂಗ್ ಜಾಗ ಹಾಗೂ ಕಿತ್ತು ಹೋಗಿರುವ ರಸ್ತೆಗಳನ್ನು ಸರಿಪಡಿಸಲಿ. ನಂತರ ದಂಡ ಹಾಕಲಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.