ಹುಬ್ಬಳ್ಳಿ: ವಿಧಾನ ಪರಿಷತ್ ಇತಿಹಾಸದಲ್ಲೇ ಈ ರೀತಿಯ ವಿಷಾದಕರ ಘಟನೆ ನಡೆದದ್ದು ಇದೇ ಮೊದಲು. ಪರಿಷತ್ನಲ್ಲಿ ಬಿಜೆಪಿ, ಜೆಡಿಎಸ್ಗೆ ಬಹುಮತ ಇರಲಿಲ್ಲವೆಂದು ರಾಜ್ಯದ ಜನರೆದುರು ಡಿಕೆಶಿ ಹಾಗೂ ಸಿದ್ದರಾಮಯ್ಯ ಸ್ಪಷ್ಟಪಡಿಸಲಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪರಿಷತ್ ಗಲಾಟೆ ಕುರಿತು ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನಗರದಲ್ಲಿಂದು ಮಾತನಾಡಿದ ಅವರು, ಬಂಡತನದಿಂದ ಸಭಾಪತಿ ಸ್ಥಾನ ಉಳಿಸಿಕೊಳ್ಳಲು ಮಾಡಿದ ಕುತಂತ್ರ ರಾಜಕಾರಣವಿದು. ಜೆಡಿಎಸ್, ಬಿಜೆಪಿ ಒಂದಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಪ್ರತಾಪ್ ಚಂದ್ರ ಶೆಟ್ಟಿ ಸಜ್ಜನ ರಾಜಕಾರಣಿ, ಅವರಿಗೂ ಕಪ್ಪು ಚುಕ್ಕೆ ಬರುವಂತೆ ಮಾಡಿದ್ದಾರೆ. ಇದೊಂದು ಪೂರ್ವನಿಯೋಜಿತ ಸಂಚು ಎಂದು ಕಿಡಿಕಾರಿದರು.
ಬಹುಮತವಿಲ್ಲದೇ ಅಲ್ಪಸಂಖ್ಯಾತರಾದ ಬಳಿಕ ರಾಜೀನಾಮೆ ಕೊಡಬೇಕಿತ್ತು. ಪರಿಷತ್ನಲ್ಲಿ ನಡೆದ ಘಟನೆಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಕ್ಷಮೆ ಕೇಳಬೇಕು. ಜೊತೆಗೆ ಮುಂದೆ ಹೀಗೆ ಮಾಡುವುದಿಲ್ಲವೆಂದು ಹೇಳಿಕೆ ನೀಡಬೇಕು. ಬಹುಮತ ಇಲ್ಲದಿರುವವರನ್ನು ಮುಂದುವರಿಸಲು ಸಾಧ್ಯವೇ ಇಲ್ಲ. ದಾದಾಗಿರಿ ಮಾಡಿಕೊಂಡು ಬಹುಮತ ಇಲ್ಲದಿದ್ದರೂ ನಾವು ಸಭಾಪತಿಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎನ್ನುವುದನ್ನು ಜನ ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಷತ್ಗೆ ಅದರದ್ದೇ ಆದ ಮಹತ್ವವಿದೆ. ಈ ಕುತಂತ್ರ ರಾಜಕಾರಣ ದೇಶದ ಜನರಿಗೆ ಮಾಡಿದ ದ್ರೋಹ. ಪ್ರತಾಪ್ ಚಂದ್ರಶೆಟ್ಟಿ ಅವರೇ ರಾಜೀನಾಮೆ ಕೊಡಬೇಕಿತ್ತು. ರಾಜೀನಾಮೆ ಕೊಟ್ಟ ಬಳಿಕ ಯಾರು ಸಭಾಪತಿ ಆಗಬೇಕು ಎನ್ನುವುದು ಜೆಡಿಎಸ್ ಮತ್ತು ಬಿಜೆಪಿಯವರು ಕುಳಿತು ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.
ಗ್ರಾಮ ಪಂಚಾಯತ್ ಚುನಾವಣೆ ಕುರಿತು ಮಾತನಾಡಿದ ಅವರು, ನಾವು ಈ ಬಾರಿ ಶೇಕಡಾ 80 ರಷ್ಟು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.