ಹುಬ್ಬಳ್ಳಿ:ನಗರದ ಖಾಸಗಿ ಹೋಟೆಲ್ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಗಳ ಮದುವೆ ಅದ್ದೂರಿಯಾಗಿ ನಡೆಯುತ್ತಿದೆ. ಆದರೆ ಸಚಿವರ ಮಗಳ ಮದುವೆ ಸಮಾರಂಭದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿಬಂದಿದೆ.
ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಸೆಪ್ಟೆಂಬರ್ 3ರಂದು ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು, ವಾರ್ಡ್ನ ಮತದಾರರಲ್ಲದವರು ಕ್ಷೇತ್ರದಿಂದ ಹೊರಹೋಗುವಂತೆ ಆಯೋಗದ ಸೂಚನೆಯಿದೆ. ಆದರೆ ಮದುವೆ ಸಮಾರಂಭದಲ್ಲಿ ಗಣ್ಯಾತಿಗಣ್ಯರು ಭಾಗಿಯಾಗುತ್ತಿದ್ದಾರೆ.
ನೀತಿ ಸಂಹಿತೆ ಇದ್ದರೂ ಮದುವೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜನಾಥ ಸಿಂಗ್, ಪಿಯೂಶ್ ಗೋಯಲ್, ಧರ್ಮೆಂದ್ರ ಪ್ರಧಾನ್ ಸೇರಿದಂತೆ ಕೇಂದ್ರದ ಹತ್ತಕ್ಕೂ ಹೆಚ್ಚು ಸಚಿವರು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗುತ್ತಿದ್ದಾರೆ.
ಇದು ನೀತಿ ಸಂಹಿತೆ ಉಲ್ಲಂಘನೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಸಚಿವರ ದಂಡು ಹುಬ್ಬಳ್ಳಿಗೆ ಆಗಮಿಸುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಇದು ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲವೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ RT-PCR ಟೆಸ್ಟ್ ಕಡ್ಡಾಯ: ಕರ್ನಾಟಕ ಸರ್ಕಾರದ ಆದೇಶ