ಹುಬ್ಬಳ್ಳಿ :ಬಹಳ ಬಲಿಷ್ಠವಾದ ಸರ್ಕಾರ ಇದ್ದರೂ ಹಾನಗಲ್ನಲ್ಲಿ ಮುಖ್ಯಮಂತ್ರಿಗಳು ಬೀಡು ಬಿಟ್ಟಿದ್ದಾರೆ. ಮಂತ್ರಿಗಳೆಲ್ಲಾ ಬಂದಿದ್ದಾರೆ, ಚೀಲಗಳನ್ನು ತಂದಿದ್ದಾರೆ. ಇದನ್ನು ನೋಡಿದರೆ ಸೋಲಿನ ಭೀತಿ ಕಾಡುತ್ತಿರುವುದು ಸ್ಪಷ್ಟವಲ್ಲವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಿಜೆಪಿ ವಿರುದ್ಧ ಕಿಡಿಕಾರಿದರು.
ಬಲಿಷ್ಠ ಸರ್ಕಾರವಿದ್ದರೂ ಹಾನಗಲ್ನಲ್ಲಿ ಸಿಎಂ ಬೀಡು ಬಿಟ್ಟಿದ್ದು ಹಾಸ್ಯಾಸ್ಪದ.. ನಗರದಲ್ಲಿಂದು ಮಾತನಾಡಿದ ಅವರು, ಬಿಜೆಪಿ ಹಣ ಹಂಚುತ್ತಿರುವ ವಿಚಾರವಾಗಿ ಕಾಂಗ್ರೆಸ್ ಕೇವಲ ಆರೋಪ ಮಾಡುತ್ತಿದ್ದೆಯೇ ಹೊರತು, ಅದಕ್ಕೆ ಸಾಕ್ಷಿ ನೀಡುತ್ತಿಲ್ಲ ಎಂಬ ಬಿಜೆಪಿಯ ನಾಯಕರ ಹೇಳಿಕೆಗೆ ಉತ್ತರಿಸಿದ ಅವರು, ‘ಅವರಿಗೆ ವಿಡಿಯೋ ಸಾಕ್ಷಿ ಬಿಡಬೇಕಾ? ಹಾಗಿದ್ದರೆ, ಅವರು ದುಡ್ಡು ಹಂಚುತ್ತಿರುವ ವಿಡಿಯೋ ಮಾಡಿ ಅದನ್ನು ಪ್ರಕಟಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ.
ಹಿಂದೆ ನಾವು ಈ ರೀತಿ ಸಾಕಷ್ಟು ಸಾಕ್ಷಿಗಳನ್ನು ಬಹಿರಂಗಪಡಿಸಿದ್ದರೂ ಚುನಾವಣಾ ಆಯೋಗ ಯಾವುದೇ ಕ್ರಮಕೈಗೊಂಡಿರಲಿಲ್ಲ. ಈಗ ಮತ್ತೊಮ್ಮೆ ಬಹಿರಂಗ ಮಾಡುತ್ತೇವೆ. ಅದು ದೊಡ್ಡ ವಿಚಾರವಲ್ಲ ಎಂದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಚಾರ ಏನೆಂದರೆ, ಈ ಹಿಂದೆ ಬಿಜೆಪಿ ನಾಯಕರು ಜನರಿಗೆ ಕೊಟ್ಟಿದ್ದ ಮಾತು ಏನು? ಅಧಿಕಾರಕ್ಕೆ ಬಂದ ನಂತರ ಅವರು ಉಳಿಸಿಕೊಂಡಿದ್ದಾರಾ? ಇಲ್ಲವಾ? ಎಂಬುದಷ್ಟೇ.. ಕೋವಿಡ್ ಸಂದರ್ಭದಲ್ಲಿ ಜನರಿಗೆ ಕೊಟ್ಟ ಮಾತು ಉಳಿಸಿಕೊಂಡರಾ? ಡಬಲ್ ಇಂಜಿನ್ ಸರ್ಕಾರ ಕೊಡಿ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು.
ಈಗ ಎಲ್ಲ ರೈತರ ಆದಾಯ ಡಬಲ್ ಆಗಿದೆಯಾ ಎಂದು ರೈತರನ್ನು ಕೇಳಿದರೆ, ಎಲ್ಲರೂ ಆಗಿಲ್ಲ ಅಂತಲೇ ಹೇಳುತ್ತಿದ್ದಾರೆ. ಬದಲಿಗೆ ರಸಗೊಬ್ಬರ ಬೆಲೆ ಏರಿಕೆ ಹಾಗೂ ಮಾರುಕಟ್ಟೆ ಇಲ್ಲದೇ ಅವರ ಜೀವನ ದುಸ್ಥಿತಿಗೆ ಸಾಗಿದೆ. ಕಾರ್ಮಿಕರಿಗೆ ಸರ್ಕಾರ ಘೋಷಿಸಿದ ಪರಿಹಾರ ಸಿಕ್ಕಿಲ್ಲ. ಈ ಸರ್ಕಾರದಿಂದ ಯಾರೊಬ್ಬರಿಗೂ ಸಹಾಯವಾಗಿಲ್ಲ.
ನಾನು ಕೇಳಿದ ರೈತ, ಕಾರ್ಮಿಕ, ಚಾಲಕ, ವರ್ತಕ, ಬೀದಿ ವ್ಯಾಪಾರಿಗಳು ಎಲ್ಲರೂ ಈ ಸರ್ಕಾರದಿಂದ ನಮಗೆ ಸಹಾಯವಾಗಿಲ್ಲ ಎಂದೇ ಹೇಳುತ್ತಿದ್ದಾರೆ. ಇಷ್ಟಾದರೂ ಬಿಜೆಪಿಯವರು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ? ಜನ ಅವರಿಗೆ ಮತ ಯಾಕೆ ನೀಡಬೇಕು? ಎಂದು ಪ್ರಶ್ನಿಸಿದರು.