ಹುಬ್ಬಳ್ಳಿ: ಕೊರೊನಾ ಸೋಂಕಿತರ ಸಂಖ್ಯೆ ದಿನ ಕಳೆದಂತೆ ಇಳಿಮುಖವಾಗುತ್ತಿರುವುದರಿಂದ ಜಿಲ್ಲೆಯಲ್ಲಿನ 84 ಕೋವಿಡ್ ಕೇರ್ ಸೆಂಟರ್ ಪೈಕಿ 64 ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿತ್ತು. ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಎಷ್ಟೋ ಜನರು ಅಸುನೀಗಿದ್ದರು.
ಜತೆಗೆ ಹೋಂ ಐಸೋಲೇಷನ್‌ನಲ್ಲಿ ಇರುವವರು ಹೊರಗೆ ಅಲೆದಾಡಿ ಸೋಂಕು ಹೆಚ್ಚಳಕ್ಕೆ ಕಾರಣರಾಗಿದ್ದರು. ಇದನ್ನು ಮನಗಂಡು ಜಿಲ್ಲಾಡಳಿತ ಸೋಂಕಿತರನ್ನು ಹೋಂ ಐಸೋಲೇಶನ್ ಮಾಡದೆ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಕೇಂದ್ರಗಳನ್ನು ತೆರೆಯಲಾಗಿತ್ತು. ಹುಬ್ಬಳ್ಳಿ-ಧಾರವಾಡ ನಗರ-11, ಧಾರವಾಡ ಗ್ರಾಮೀಣ-10, ಹುಬ್ಬಳ್ಳಿ ಗ್ರಾಮೀಣ-14, ಕಲಘಟಗಿ-12, ಅಣ್ಣಿಗೇರಿ-8, ಕುಂದಗೋಳ-16, ನವಲಗುಂದ -8, ಅಳ್ನಾವರ-5 ಹೀಗೆ ಒಟ್ಟು 84 ಕೇಂದ್ರಗಳನ್ನು ತೆರೆಯಲಾಗಿತ್ತು. ಹೋಂ ಐಸೋಲೇಷನ್‌ನಲ್ಲಿದ್ದ ಕೆಲವರನ್ನು ಈ ಕೇಂದ್ರಕ್ಕೆ ದಾಖಲಿಸಲಾಗಿತ್ತು.
ಜೊತೆಗೆ ಮನೆಗಳಲ್ಲಿ ಪ್ರತ್ಯೇಕವಾಗಿ ವಾಸವಾಗಿರಲು ಅವಕಾಶ ಇಲ್ಲದ ಸೌಮ್ಯ ಲಕ್ಷಣಗಳಿರುವ ಸೋಂಕಿತರನ್ನು ಸಹ ದಾಖಲಿಸಲಾಗಿತ್ತು. ಜಿಲ್ಲೆಯಲ್ಲಿ ಈವರೆಗೆ ಒಟ್ಟು 2011 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.