ಕರ್ನಾಟಕ

karnataka

ETV Bharat / city

ಹುಬ್ಬಳ್ಳಿಯಲ್ಲಿ ದೇಶಪ್ರೇಮದ ರೆಸ್ಟೋರೆಂಟ್​.. ತಿನ್ನುತ್ತಾ ರಾಷ್ಟ್ರಕಟ್ಟಿದವರ ಬಗ್ಗೆನೂ ತಿಳ್ಕೊಳ್ಳಿ.. - ಹುತಾತ್ಮರ ಭಾವಚಿತ್ರಗಳು

ಹುಬ್ಬಳ್ಳಿ ವಿದ್ಯಾನಗರದಲ್ಲಿರುವ ಪಂಜುರ್ಲಿ ರೆಸ್ಟೋರೆಂಟ್ ಮಾಲೀಕರ ಹೊಸ ಪ್ರಯೋಗ ಜನರಲ್ಲಿ ದೇಶಪ್ರೇಮವನ್ನು ಬೆಳೆಸುತ್ತಿದೆ. ಹುತಾತ್ಮರ ಭಾವಚಿತ್ರಗಳು, ನುಡಿಮುತ್ತುಗಳ ಸಾಲುಗಳು ರೆಸ್ಟೋರೆಂಟ್ ಗೋಡೆ ಮೇಲೆ ರಾರಾಜಿಸುತ್ತಿವೆ. ಹೊಸ ಅನುಭೂತಿ ನೀಡುವುದರ ಜತೆಗೆ ಗ್ರಾಹಕರನ್ನು ಸೆಳೆಯುತ್ತಿದೆ ಈ ರೆಸ್ಟೋರೆಂಟ್‌.

ರೆಸ್ಟೋರೆಂಟ್​ನಲ್ಲಿ ದೇಶಪ್ರೇಮ

By

Published : Jun 14, 2019, 8:36 PM IST

ಹುಬ್ಬಳ್ಳಿ: ದೇಶಕ್ಕಾಗಿ ಪ್ರಾಣ ತೆತ್ತ ಹುತಾತ್ಮರ ಭಾವಚಿತ್ರಗಳು, ಝಗಮಗಿಸುವ ವಿದ್ಯುತ್​ ದೀಪಗಳ ಬೆಳಕಿನ ಮಧ್ಯೆ ಹೊಳೆಯುವ ನುಡಿಮುತ್ತುಗಳ ಸಾಲುಗಳು, ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳು...

ರೆಸ್ಟೋರೆಂಟ್​ನಲ್ಲಿ ದೇಶಪ್ರೇಮ...

ಹುಬ್ಬಳ್ಳಿಯ ರೆಸ್ಟೋರೆಂಟ್​ನ ಮಾಲೀಕರ ವಿಭಿನ್ನ ಪ್ರಯೋಗವಿದು. ಇಲ್ಲಿ ಗ್ರಾಹಕರಿಗೆ ರುಚಿರುಚಿಯಾದ ಆಹಾರದ ಜೊತೆಜೊತೆಗೆ ದೇಶಭಕ್ತಿಯನ್ನೂ ಉಣಬಡಿಸಲಾಗುತ್ತಿದೆ.

ವಿದ್ಯಾನಗರದಲ್ಲಿರುವ ಪಂಜುರ್ಲಿ ರೆಸ್ಟೋರೆಂಟ್​ನಲ್ಲಿ ಇವು ನಿಮಗೆ ಕಾಣಸಿಗುತ್ತವೆ. ಇಲ್ಲಿ​ನ ಪ್ರತೀ ಗೋಡೆಯೂ ದೇಶಪ್ರೇಮದ ಪರಿಕಲ್ಪನೆಯಲ್ಲಿ ಅದ್ಭುತವಾಗಿ ಚಿತ್ತಾರಗೊಂಡಿವೆ. ಊಟ, ತಿಂಡಿಯ ಜೊತೆಗೆ ನೈತಿಕ ಮೌಲ್ಯಗಳನ್ನೂ ಜಾಗೃತಗೊಳಿಸುವ ಪ್ರಯತ್ನದಲ್ಲಿ ಈ ರೆಸ್ಟೋರೆಂಟ್ ಯಶಸ್ವಿಯಾಗಿದೆ.

ಅದೆಷ್ಟೋ ದೇಶಭಕ್ತರು, ಹುತಾತ್ಮರ ಭಾಚಿತ್ರಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಊಟದ ಜೊತೆಗೆ ಜ್ಞಾನವೂ ಸಿಗುತ್ತೆ. ದೇಶ ಪ್ರೇಮವೂ ಹೆಚ್ಚಾಗುತ್ತೆ. ಮತ್ತೆ ಇದೇ ಹೋಟೆಲ್​ಗೆ ಬರುವಂತೆ ಮಾಡುತ್ತೆ ಅಂತಾರೆ ರೆಸ್ಟೋರೆಂಟ್​ನಲ್ಲಿದ್ದ ಗ್ರಾಹಕರೊಬ್ಬರು.

ಗ್ಲಾಸ್ ಪೇಂಟಿಂಗ್​ನಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ್​, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಮಹಾತ್ಮ ಗಾಂಧಿ, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಭಾಸಚಂದ್ರ ಬೋಸ್, ಸ್ವಾಮಿ ವಿವೇಕಾನಂದ, ಸರ್ ಎಂ ವಿಶ್ವೇಶ್ವರಯ್ಯ, ಲಾಲ್ ಬಹದ್ದೂರ್​ ಶಾಸ್ತ್ರಿ ಅವರ ಭಾವಚಿತ್ರಗಳು ರಾರಾಜಿಸುತ್ತಿವೆ. ಅಷ್ಟೇ ಅಲ್ಲ, ಹುತಾತ್ಮ ಯೋಧ ಮೇ. ಸಂದೀಪ ಉನ್ನಿಕೃಷ್ಣನ್, ಗಗನಯಾತ್ರಿ ಕಲ್ಪನಾ ಚಾವ್ಲಾ, ವರನಟ ಡಾ.ರಾಜಕುಮಾರ್​ ಹೀಗೆ ತಲಾ 16 ಸಾವಿರ ಮೊತ್ತದ 14 ಭಾವಚಿತ್ರಗಳು ಇಲ್ಲಿವೆ.

ಗೋಡೆಯ ಇಕ್ಕೆಲ ಮತ್ತು ಮೇಲ್ಛಾವಣಿಗೆ ಜೋಡಿಸಿದ ಕನ್ನಡಿಯ ಮೇಲೆ ನುಡಿಮುತ್ತುಗಳನ್ನ ಬರೆಸಲಾಗಿದೆ. ವಿದ್ಯುತ್ ದೀಪದ ಬೆಳಕಿನಲ್ಲಿ ಈ ಬರಹಗಳು ವರ್ಣಮಯವಾಗಿ ರಾರಾಜಿಸುತ್ತವೆ. ಇಲ್ಲಿರುವ 50ಕ್ಕೂ ಅಧಿಕ ವಾಕ್ಯಗಳು ಜನರಿಗೆ ನೈತಿಕ ಮೌಲ್ಯಗಳನ್ನು ತಿಳಿಸಿಕೊಡುತ್ತಿವೆ. ಪ್ರತೀ ಟೇಬಲ್ ಡಿವೈಡರ್ ಮೇಲೆ ಸತ್ಯ ಮೇವ ಜಯತೆ ಮತ್ತು ಜೈ ಜವಾನ್ ಜೈ ಕಿಸಾನ್​ ಎಂದು ಬರೆಸಲಾಗಿದ್ದು, ಗಮನ ಸೆಳೆಯುತ್ತವೆ. ಇಷ್ಟಲ್ಲದೆ, ಮಾನವನ ನಾಗರಿಕತೆ ಬಿಂಬಿಸುವ ಭತ್ತದ ನಾಟಿ ಮಾಡುವ ಶೈಲಿ ಹಾಗೂ ಕಂಬಳದ ಚಿತ್ರಗಳು ಮನಸೆಳೆಯುತ್ತವೆ.

ಧಾರವಾಡ ಮತ್ತು ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಪಂಜುರ್ಲಿ ರೆಸ್ಟೋರೆಂಟ್​ಗಳಲ್ಲೂ ಇದೇ ಪ್ರಯೋಗವನ್ನು ಮಾಡಲಾಗಿದ್ದು, ಪ್ರಸಿದ್ಧ ಆಟಗಾರರ ಚಿತ್ರಗಳನ್ನೂ ಬಿಡಿಸಲಾಗಿದೆ. ಇದು ಗ್ರಾಹರಿಕರನ್ನು ಸೆಳೆಯುತ್ತಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ರೆಸ್ಟೋರೆಂಟ್​ನಲ್ಲಿ ಊಟ ತಿಂಡಿಗೆ ಬರುವ ಜನರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುತ್ತಾರೆ ರೆಸ್ಟೋರೆಂಟ್ ಮಾಲೀಕ ರಾಜೇಂದ್ರ ಶೆಟ್ಟಿ.

ಜನರಲ್ಲಿ ದೇಶಭಕ್ತಿಯನ್ನು ಜಾಗೃತಿಗೊಳಿಸಿದಾಗಲೇ ದೇಶ ಅಭಿವೃದ್ಧಿಯಾಗುತ್ತೆ. ಈ ಹಿನ್ನೆಲೆಯಲ್ಲಿ ಈ ರೆಸ್ಟೋರೆಂಟ್ ನವೀಕರಣಕ್ಕೆ ಬರೊಬ್ಬರಿ 70 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆಯಂತೆ.ಕೇವಲ ಆಹಾರ ಒದಗಿಸುವುದಷ್ಟೇ ಅಲ್ಲದೇ, ಅದರೊಟ್ಟಿಗೆ ದೇಶಭಕ್ತಿಯನ್ನೂ ಉಣಬಡಿಸುವ ಮೂಲಕ ರೆಸ್ಟೋರೆಂಟ್ ಈಗ ವಿದ್ಯಾನಗರ ಜನತೆಯ ಫೆವರೇಟ್ ಆಗಿದೆ.

ABOUT THE AUTHOR

...view details