ಧಾರವಾಡ:ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಐದಕ್ಕಿಂತ ಹೆಚ್ಚು ಪ್ರಕರಣಗಳಿರುವ ವಲಯವನ್ನು ಕಂಟೇನ್‍ಮೆಂಟ್ ಝೋನ್ ಎಂದು ಜಿಲ್ಲಾಡಳಿತ ಘೋಷಿಸಿದೆ.
ಜಿಲ್ಲೆಯ ಯಾವುದೇ ವಸತಿ ನಿಲಯ, ಶೈಕ್ಷಣಿಕ ಸಂಸ್ಥೆ, ವಸತಿ ಸಮುಚ್ಛಯ ಸಂಕೀರ್ಣ ಅಥವಾ ಪ್ರದೇಶಗಳಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಕೋವಿಡ್ ಸಕ್ರಿಯ ಪ್ರಕರಣಗಳು ವರದಿಯಾದರೆ ಆ ಪ್ರದೇಶವನ್ನು ಕಂಟೇನ್‍ಮೆಂಟ್ ವಲಯವೆಂದು ಗುರುತಿಸಿ, ಘೋಷಿಸಲು ಹುಬ್ಬಳ್ಳಿ - ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಪಾಲಿಕೆಯ ಆಯುಕ್ತರಿಗೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಿಸಿದ ತಹಶೀಲ್ದಾರರಿಗೆ ಅಧಿಕಾರ ಪ್ರತ್ಯಾಯೋಜಿಸಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಆದೇಶಿಸಿದ್ದಾರೆ.
ಅಗತ್ಯವಾಗಿರುವುದರಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗಳ ಸಭೆಗಳನ್ನು ಅತ್ಯಂತ ಅಗತ್ಯ ಸಂದರ್ಭದಲ್ಲಿ ಆಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದ್ದಾರೆ.
ಕೋವಿಡ್ 2ನೇ ಅಲೆಯ ಕುರಿತು ಅಗತ್ಯ ಎಚ್ಚರಿಕೆಗಳನ್ನು ವಹಿಸುವುದು ಅನಿವಾರ್ಯ ಮತ್ತು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಮುಂದಿನ ಒಂದೆರಡು ತಿಂಗಳ ಅವಧಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ತಮ್ಮ ಇಲಾಖಾ ಸಭೆಗಳನ್ನು ನಿಯಂತ್ರಿಸುವುದು ಉತ್ತಮ. ಸಭೆ ನಡೆಸುವುದು ಅನಿವಾರ್ಯವಾದಲ್ಲಿ, ಸಭೆಯಲ್ಲಿ ಪಾಲ್ಗೊಳ್ಳುವವರು ಸಾಕಷ್ಟು ಆರೋಗ್ಯಯುತ ಸಾಮಾಜಿಕ ಅಂತರ ಇರುವಂತೆ ಸಭೆ ನಡೆಸಲು ಹಾಗೂ ವಿಡಿಯೋ ಸಂವಾದದ ಮುಖಾಂತರ ವರ್ಚುಯಲ್ ಆಗಿ ಸಭೆಗಳನ್ನು ಅಧಿಕಾರಿಗಳು ಆಯೋಜಿಸಲು ಸೂಕ್ತ ಕ್ರಮ ವಹಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಿರ್ದೇಶಿಸಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸುತ್ತೋಲೆ ಹೊರಡಿಸಿ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.