ಹುಬ್ಬಳ್ಳಿ:ಜಗತ್ತನ್ನೇ ತಲ್ಲಣಗೊಳಿಸಿದ ಮೊದಲ ಹಾಗೂ ಎರಡನೇ ಅಲೆಯ ಕೊರೊನಾ ಪರಿಸ್ಥಿತಿ ನಿರ್ವಹಣೆ ಮಾಡಿರುವ ಧಾರವಾಡ ಜಿಲ್ಲಾಡಳಿತ ಮೂರನೇ ಅಲೆ ಎದುರಿಸಲು ಸನ್ನದ್ಧವಾಗಿದೆ. ಕೋವಿಡ್ನಿಂದ ಸಾಕಷ್ಟು ಸಂಕಷ್ಟ ಎದುರಿಸಿದ್ದ ಜಿಲ್ಲಾಡಳಿತವು ಇದೀಗ ಮೂರನೇ ಅಲೆಯ ಪ್ರಾರಂಭಿಕ ಹಂತದಲ್ಲಿಯೇ ತಯಾರಿ ನಡೆಸಿದೆ.
ಕಳೆದ ಬಾರಿ ಬೆಡ್, ಆಕ್ಸಿಜನ್ ಹಾಗೂ ವೆಂಟಿಲೇಟರ್ ಸಮಸ್ಯೆ ಎದುರಿಸಿದ್ದ ಜಿಲ್ಲಾಡಳಿತ ಈಗಾಗಲೇ 500 ಬೆಡ್ ಹೆಚ್ಚಳಕ್ಕೆ ಸಿದ್ಧತೆ ನಡೆಸುತ್ತಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಕಾಡುವ ಬಗ್ಗೆ ತಜ್ಞರು ನೀಡಿರುವ ಮಾಹಿತಿ ಬೆನ್ನಲ್ಲೇ ಮಕ್ಕಳಿಗೆ ಚಿಕಿತ್ಸೆ ನೀಡಲು ಮತ್ತಷ್ಟು ಮ್ಯಾನ್ ಪವರ್ ಹಾಗೂ ಮೂಲಭೂತ ಸೌಕರ್ಯಗಳ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಕೋವಿಡ್ ನಿರ್ವಹಣೆ ಕುರಿತು ಡಿಸಿ ನಿತೇಶ್ ಪಾಟೀಲ್ ಪ್ರತಿಕ್ರಿಯೆ ಧಾರವಾಡ ಜಿಲ್ಲೆಯಲ್ಲಿ ಸದ್ಯ 8 -10 ಕೋವಿಡ್ ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿದೆ. ಗಡಿ ಜಿಲ್ಲೆಗಳಲ್ಲಿ ಕೋವಿಡ್ ಕೇಸ್ಗಳ ಪ್ರಮಾಣ ಹೆಚ್ಚಾಗುತ್ತಿವೆ. ಮುಂದಿನ ದಿನಗಳಲ್ಲಿ ಮೂರನೇ ಅಲೆ ಅಬ್ಬರದ ಸಾಧ್ಯತೆಗಳಿದ್ದು, ಸರ್ಕಾರದ ಆದೇಶದಂತೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಇದನ್ನೂ ಓದಿ:ಶಾಲಾರಂಭಕ್ಕೆ ಮುಹೂರ್ತ: ಶಿಕ್ಷಕರು, ವಿದ್ಯಾರ್ಥಿಗಳ ಕುಟುಂಬದವರಿಗೆ ಲಸಿಕೆ ನೀಡಲು ಸರ್ಕಾರದ ಸೂಚನೆ
ಕಿಮ್ಸ್ನಲ್ಲಿ ಮೂರು ಆಕ್ಸಿಜನ್ ಪ್ಲಾಂಟ್ ಅಸ್ತಿತ್ವಕ್ಕೆ ತರಲಾಗಿದೆ. ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್ ಪ್ಲಾಂಟ್ ಅಸ್ತಿತ್ವಕ್ಕೆ ತರಲಾಗಿದೆ. ಕಿಮ್ಸ್, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. ಮಕ್ಕಳಿಗಾಗಿಯೂ 500 ಬೆಡ್ಗಳ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.