ಹುಬ್ಬಳ್ಳಿ: ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯ ನಡೆಸಲು ಉದ್ದೇಶಿಸಿದ್ದ ಮಧ್ಯಂತರ ಸೆಮಿಸ್ಟರ್ ಭೌತಿಕ ಪರೀಕ್ಷೆಯನ್ನು ರದ್ದುಗೊಳಿಸಿ ಧಾರವಾಡದ ಹೈಕೋರ್ಟ್ ಪೀಠ ಮಹತ್ವದ ತೀರ್ಪು ನೀಡಿದೆ. ಈಗಾಗಲೇ ನಿಗದಿ ಪಡಿಸಿದ ವೇಳಾಪಟ್ಟಿಯಂತೆ ಇಂದಿನಿಂದ ನಡೆಯಬೇಕಿದ್ದ ಎಲ್‌ಎಲ್‌ಬಿ ಪರೀಕ್ಷೆಗಳನ್ನು ಹೈಕೋರ್ಟ್ ರದ್ದುಪಡಿಸಿ ಕಾನೂನು ಪದವಿಯ 3 ಮತ್ತು 5ನೇ ಸೆಮಿಸ್ಟರ್ನ ವಿದ್ಯಾರ್ಥಿಗಳಿಗೆ 50:50 ಅನುಪಾತದ ಆಧಾರದ ಮೇಲೆ ಮುಂದಿನ ತರಗತಿಗಳಿಗೆ ಬಡ್ತಿ ನೀಡಬೇಕೆಂದು ಸೂಚಿಸಿದೆ.
ಪ್ರತಿಭಟನೆ:
ನ್ಯಾಯಮೂರ್ತಿ ಹೇಮಂತ ಚಂದನಗೌಡ ಅವರ ನೇತೃತ್ವದ ಏಕಸದಸ್ಯ ಪೀಠ ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಹುಬ್ಬಳ್ಳಿಯ ನವನಗರದ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿಗಳ ನಡುವೆ ಈ ವಿಚಾರವಾಗಿ ತೀವ್ರ ಜಟಾಪಟಿ ನಡೆದಿತ್ತು. ಕಾನೂನು ವಿಶ್ವವಿದ್ಯಾಲಯ ಆವರಣದಲ್ಲಿ ಹಲವಾರು ವಿದ್ಯಾರ್ಥಿಗಳು ಕಳೆದ ಒಂದು ವಾರದಿಂದ ಉಪವಾಸ ಸತ್ಯಾಗ್ರಹ ಕುಳಿತಿದ್ದರು. ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಕೂಡ ಕಾನೂನು ವಿಶ್ವವಿದ್ಯಾಲಯದ ನಡೆಯನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದವು.
ಈ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ಪಕ್ಷದ ನಾಯಕರು ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ್ದರು. ಆದ್ರೆ ಕಾನೂನು ವಿವಿ ಕುಲಪತಿ ಪ್ರೊ.ಈಶ್ವರ್ ಭಟ್ ಹಾಗೂ ಕಾನೂನು ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ವಿದ್ಯಾರ್ಥಿಗಳ ಕೂಗಿಗೆ ಸ್ಪಂದಿಸದೇ ನಿರ್ಲಕ್ಷ್ಯ ವಹಿಸಿದ್ದರೆನ್ನುವ ಆರೋಪವೂ ಕೇಳಿಬಂದಿತ್ತು.
ಹೈಕೋರ್ಟ್ನಲ್ಲಿ ರಿಟ್ ಅರ್ಜಿ:
ಆದ್ರೆ ಕೊರೊನಾ ಕಾರಣದಿಂದ ಸರಿಯಾಗಿ ತರಗತಿಗಳು ನಡೆಯದ ಹಿನ್ನೆಲೆ ಬಾರ್ ಕೌನ್ಸಿಲ್ ಮತ್ತು ಯುಜಿಸಿ ನಿರ್ದೇಶನಗಳ ಅನುಸಾರವಾಗಿ ವಿದ್ಯಾರ್ಥಿಗಳನ್ನು 4 ಮಾದರಿಯ ಮೌಲ್ಯಮಾಪನದ ಮೂಲಕ ಮುಂದಿನ ತರಗತಿಗಳಿಗೆ ಬಡ್ತಿ ನೀಡುವಂತೆ ವಿದ್ಯಾರ್ಥಿಗಳು, ಪಕ್ಷಗಳು ಸೂಚಿಸಿದ್ದವು. ವಿಶ್ವವಿದ್ಯಾಲಯದ ಕುಲಪತಿ ಮತ್ತು ಕಾನೂನು ಸಚಿವರು ಭೌತಿಕ ಪರೀಕ್ಷೆ ನಡೆಸಲು ಸಿದ್ಧವೆಂದು, ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಕಾನೂನು ವಿಶ್ವವಿದ್ಯಾಲಯ ಕೈಗೊಂಡಿದ್ದ ಈ ನಿರ್ಣಯವನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದರು.
ಈಗಾಗಲೇ ಬಾರ್ ಕೌನ್ಸಿಲ್ ನಿರ್ದೇಶನದಂತೆ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲು ಆಫ್ ಲೈನ್ ಹೊರತಾಗಿ ಹಲವು ಆಯ್ಕೆಗಳನ್ನು ನೀಡಿದೆ. ಇದರಲ್ಲಿ ಪ್ರಮುಖವಾಗಿ ಆನ್ ಲೈನ್ ಪರೀಕ್ಷೆ, ಆಂತರಿಕ ಮೌಲ್ಯಮಾಪನ, ಸೆಮಿನಾರ್, ಓಪನ್ ಬುಕ್ ಹಾಗೂ ಇನ್ನಿತರೆ ಆಯ್ಕೆಗಳು ಲಭ್ಯ ಇವೆ. ಈಗಾಗಲೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಆಫ್ ಲೈನ್ ಹೊರತಾದ ಆಯ್ಕೆಗಳ ಮೂಲಕ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಿ ಮುಂದಿನ ತರಗತಿಗಳಿಗೆ ಬಡ್ತಿ ನೀಡುವ ಮೂಲಕ ಹೊಸ ಅಕಾಡೆಮಿಕ್ ವರ್ಷದ ತರಗತಿಗಳನ್ನು ನಡೆಸುತ್ತಿದೆ. ಈಗ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಆಫ್ ಲೈನ್ ಪರೀಕ್ಷೆ ನಡೆಸುವುದರಿಂದ ಅಕಾಡೆಮಿಕ್ ವರ್ಷ ವಿಳಂಬವಾಗುತ್ತದೆ. ಇದರಿಂದಾಗಿ 3 ವರ್ಷದ ಕಾನೂನು ಕೋರ್ಸ್ ಅನ್ನು 4 ವರ್ಷಕ್ಕೆ, 5 ವರ್ಷದ ಕೋರ್ಸ್ ಅನ್ನು 6 ವರ್ಷಕ್ಕೆ ಮುಗಿಸಬೇಕಾಗುತ್ತದೆ. ಇದರಿಂದ ತಮ್ಮ ಭವಿಷ್ಯ ಡೋಲಾಯಮಾನವಾಗುತ್ತದೆ ಎಂದು ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ನ್ಯಾಯಕ್ಕಾಗಿ ಭಾವಿ ವಕೀಲರ ಹೋರಾಟ : ಸುವರ್ಣಸೌಧದ ಎದುರು ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ
ಈ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ವಿಶ್ವವಿದ್ಯಾಲಯ ನಿರ್ಧಾರದ ವಿರುದ್ಧ ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಗೆಲುವಿನ ಜೊತೆಗೆ ಮುಂದಿನ ತರಗತಿಗಳಿಗೆ ಬಡ್ತಿ ಸಿಕ್ಕಂತಾಗಿದೆ. ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಪರೀಕ್ಷೆಯನ್ನು ನಡೆಸಿಯೇ ಸಿದ್ಧವೆಂದು ತೀರ್ಮಾನಿಸಿದ್ದ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಕುಲಪತಿ ಮತ್ತು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಯವರಿಗೆ ಹಿನ್ನಡೆಯಾಗಿದೆ.