ಧಾರವಾಡ: ಇಲ್ಲಿನ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೇರಿದ್ದು, ಇದುವರೆಗೂ ಸುಮಾರು 56 ಜನರನ್ನು ರಕ್ಷಣೆ ಮಾಡಲಾಗಿದೆ.
ದುರಂತದಲ್ಲಿ ಸತ್ತಿರುವ ನಾಲ್ವರಲ್ಲಿ ಮೂವರ ಗುರುತು ಪತ್ತೆಯಾಗಿದೆ. ಧಾರವಾಡ ಪಾರ್ವತಿ ನಗರದ ಆಶಿತ್ ಮಹೇಶ್ವರಯ್ಯ ಹಿರೇಮಠ್ (32), ಹುಬ್ಬಳ್ಳಿಯ ಆನಂದ ನಗರದ ಸಲೀಂ ಮಂಕದಾರ್ (40) ಹಾಗೂ ಮೆಹಬೂಬ್ ದೇಸಾಯಿ (40) ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಅಪರಿಚಿತ ಮಹಿಳೆಯ ಶವ ಜಿಲ್ಲಾಸ್ಪತ್ರೆಗೆ ರವಾನೆಯಾಗಿದೆ.
ರಾತ್ರಿಯಿಡೀ ರಕ್ಷಣಾ ಕಾರ್ಯ ಮುಂದುವರಿದಿದ್ದು, ಆದರೂ ಪಿಲ್ಲರ್ ಕೆಳಗೆ ಸಿಲುಕಿ ಯುವಕನೋರ್ವ ಸಾವನ್ನಪ್ಪಿದ್ದಾನೆ. ಇದೇ ವೇಳೆ ಪಿಲ್ಲರ್ ನಡುವೆ ಸಿಲುಕಿಕೊಂಡಿದ್ದ ಇಬ್ಬರು ಯುವಕರನ್ನು ಎನ್ಡಿಆರ್ಎಫ್ ತಂಡ ರಕ್ಷಣೆ ಮಾಡಿದೆ. ಇದುವರೆಗೆ ಸುಮಾರು 56 ಜನರನ್ನು ರಕ್ಷಣೆ ಮಾಡಲಾಗಿದ್ದು, ಗಾಯಗೊಂಡ ಸುಮಾರು 46 ಜನರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಸುಗಮಗೊಳಿಸಲು ಘಾಜಿಯಾಬಾದ್ನಿಂದ ಮತ್ತೆ 78 ಜನರಿರುವ ರಕ್ಷಣಾ ತಂಡ ಧಾರವಾಡ ತಲುಪಿದೆ.
ಇನ್ನು ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದವರಿಗೆ ರಕ್ಷಣಾ ತಂಡವು ಪೈಪ್ ಮೂಲಕ ನೀರು ಮತ್ತು ಗ್ಲುಕೋಸ್ ನೀಡುತ್ತಿದೆ. ಅವಶೇಷದಡಿಯಲ್ಲಿ ಸಿಲುಕಿದ ನಾಗರಾಜ ಎಂಬಾತನಿಗೆ ಪೈಪ್ ಮೂಲಕ ನೀರು ಮತ್ತು ಗ್ಲುಕೋಸ್ ರವಾನಿಸಿದ್ದಾರೆ.
ಇನ್ನೂ ಇಪ್ಪತ್ತು ಜನ ಅವಶೇಷಗಳಡಿ ಇರುವ ಶಂಕೆ...
ಕುಸಿದ ಕಟ್ಟಡದ ಅವಶೇಷಗಳಡಿಯಲ್ಲಿ ಇನ್ನೂ ಸುಮಾರು ಇಪ್ಪತ್ತು ಜನರಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಂತ್ರಜ್ಞಾನವನ್ನಾಧರಿಸಿ ರಕ್ಷಣಾ ಕಾರ್ಯ ಆರಂಭಿಸಲು ಯೋಜನೆ ಹಾಕಿಕೊಂಡ ಎನ್ಡಿಆರ್ಎಫ್ ತಂಡ, ಸ್ಯಾಟಲೈಟ್ ಆಧರಿಸಿ ಜನರ ಇರುವಿಕೆಯನ್ನು ಪತ್ತೆ ಹಚ್ಚುತ್ತಿದೆ.
ಮಾನವೀಯತೆ ಮೆರೆದ ಸ್ಥಳೀಯರು...
ಇನ್ನು ಇಂತಹ ಸನ್ನಿವೇಶದಲ್ಲೂ ರಕ್ಷಣಾ ಕಾರ್ಯದಲ್ಲಿ ರಕ್ಷಣಾ ಸಿಬ್ಬಂದಿಗೆ ಸ್ವಯಂ ಪ್ರೇರಿತವಾಗಿ ಸಾರ್ವಜನಿಕರು ಸಾಥ್ ನೀಡುತ್ತಿದ್ದಾರೆ. ರಾತ್ರಿಯಿಡೀ ಕಾರ್ಯಾಚರಣೆಯಲ್ಲಿ ತೊಡಗಿದವರಿಗೆ ಉಪಹಾರದ ವ್ಯವಸ್ಥೆಯನ್ನು ಸಾರ್ವಜನಿಕರೇ ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿದ್ದಾರೆ. ನೀರು, ಚಹಾ, ಬಿಸ್ಕೆಟ್ ಸೇರಿದಂತೆ ಉಚಿತವಾಗಿ ಉಪಹಾರ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.
ಮಾಲೀಕರ ವಿರುದ್ಧ ದೂರು ...
ಇನ್ನು ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರ ವಿರುದ್ಧ ದೂರು ದಾಖಲಾಗಿದೆ. ಗಂಗಣ್ಣ ಶಿಂತ್ರೆ, ರವಿ ಸೊರಬದ, ಮಹಾಬಳೇಶ್ವರ್, ಬಸವರಾಜ್ ನಿಗದಿ, ರಾಜು ಘಾಟಿನ್ ಹಾಗೂ ಎಂಜಿನಿಯರ್ ವಿವೇಕ ಪವಾರ ಎಂಬ ಆರು ಜನರ ವಿರುದ್ಧ ಪಾಲಿಕೆ ಸಹಾಯಕ ಆಯುಕ್ತ ಸಂತೋಷ ಅನಿಶೆಟ್ಟರ್ ಉಪನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಘಟನೆ ಬಗ್ಗೆ ಮಾತನಾಡಿರುವ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ತುಷಾರ್ ಗಿರಿನಾಥ್, ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಇನ್ನೂ ಹಲವು ಮಂದಿ ಅವಶೇಷಗಳಡಿ ಸಿಲುಕಿರೋ ಮಾಹಿತಿ ಇದೆ. ಕಟ್ಟಡಕ್ಕೆ ಅನುಮತಿ ನೀಡುವಲ್ಲಿ ಅಧಿಕಾರಿಗಳ ತಪ್ಪಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.ತಕ್ಷಣಕ್ಕೆ ಮಾನವೀಯತೆ ಆಧಾರದಲ್ಲಿ ಮೃತರ ಕುಟುಂಬಗಳಿಗೆ ಎರಡು ಲಕ್ಷ ರೂಪಾಯಿ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ.ಗಾಯಾಳುಗಳಿಗೆ ಬೇಕಾದ ಅಗತ್ಯ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ. ಈಗಾಗಲೇ ಕಟ್ಟಡದ ಮಾಲೀಕರ ಮೇಲೆ ದೂರು ದಾಖಲಾಗಿದೆ. ತನಿಖೆ ನಂತರ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.ಎಷ್ಟೇ ಪ್ರಭಾವಿ ಇದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಯಾರೂ ಕಾನೂನು ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ದುರಂತಕ್ಕೆ ಕಾರಣರಾದ ಕಟ್ಟಡ ಮಾಲೀಕರಿಂದ ಮೃತರು ಮತ್ತು ಗಾಯಾಳುಗಳಿಗೆ ಬೇಕಾದ ಅಗತ್ಯ ಹಣ ವಸೂಲಿ ಮಾಡುತ್ತೇವೆ ಎಂದಿದ್ದಾರೆ.
ಈಗಾಗಲೇ ಕಟ್ಟಡದ ನೀಲಿ ನಕ್ಷೆ ತರಿಸಿಕೊಂಡಿರುವ ಅಧಿಕಾರಿಗಳು,ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಎನ್ಡಿಆರ್ಎಫ್ ಮುಖ್ಯಸ್ಥರಿಗೆ ನೀಲಿ ನಕ್ಷೆ ಕೊಟ್ಟಿದ್ದಾರೆ. ನೀಲಿ ನಕ್ಷೆ ವೀಕ್ಷಿಸಿ ಎನ್ಡಿಆರ್ಎಫ್ ಅಧಿಕಾರಿಗಳು ಮುಂದಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಿಲುಕಿರುವ ಜನರನ್ನ ಹೊರ ತೆಗೆಯಲು ಸುರಂಗ ಮಾರ್ಗ ಕೊರೆಯಲಾಗಿದೆ. ಎನ್ಡಿಆರ್ಎಫ್ ತಂಡ ಸುರಂಗ ಮಾರ್ಗದಲ್ಲಿ ಹೋಗಿ ಕಾರ್ಯಾಚರಣೆ ನಡೆಸುತ್ತಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಡಿಐಜಿ ಎಂ.ಎನ್.ರೆಡ್ಡಿ ಹಾಗೂ ರವಿಕಾಂತೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.