ಧಾರವಾಡ: ಡ್ರಗ್ಸ್ ಪಾರ್ಟಿ ಆಯೋಜನೆ ಆರೋಪದಡಿ ಎನ್ಸಿಬಿ ಬಂಧನದಲ್ಲಿರುವ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಕೇಸ್ ಅನ್ನು ಧಾರವಾಡ ಮೂಲದ ವಕೀಲ ವಕಾಲತ್ತು ವಹಿಸಿದ್ದಾರೆ.
ನಗರದ ಖ್ಯಾತ ವಕೀಲ ಸತೀಶ್ ಮಾನೆಶಿಂಧೆ ಅವರು ಆರ್ಯನ್ ಖಾನ್ ಪರ ವಾದ ಮಂಡಿಸುತ್ತಿರುವ ವಕೀಲರಾಗಿದ್ದು, ಬಾಲಿವುಡ್ ತಾರೆಯರಾದ ಸಂಜಯ್ ದತ್, ಸಲ್ಮಾನ್ ಖಾನ್ ಮತ್ತು ರಿಯಾ ಚಕ್ರವರ್ತಿಗೆ ಜಾಮೀನು ಕೊಡಿಸುವ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ.
ಪ್ರಧಾನಿ ಮೋದಿಯೊಂದಿಗೆ ವಕೀಲ ಸತೀಶ್ ಮಾನೆಶಿಂಧೆ ಮುಂಬೈ ಬ್ಲಾಸ್ಟ್ ಪ್ರಕರಣದಲ್ಲಿ ಸಂಜಯ್ ದತ್‌ಗೆ ಜಾಮೀನು, ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್‌ನಲ್ಲಿ ಸಲ್ಮಾನ್ ಖಾನ್‌ಗೆ ಜಾಮೀನು, ಸುಶಾಂತ ಸಿಂಗ್ ಡೆತ್ ಕೇಸ್ ಸಂಬಂಧದ ಡ್ರಗ್ ಕೇಸ್‌ನಲ್ಲಿ ಸಿಲುಕಿದ್ದ ರಿಯಾ ಚಕ್ರವರ್ತಿಗೆ ಜಾಮೀನು ಕೊಡಿಸಿದ್ದಾರೆ ಲಾಯರ್ ಸತೀಶ್ ಮಾನೆಶಿಂಧೆ.
ಇದನ್ನೂ ಓದಿ:ಡ್ರಗ್ಸ್ ಪಾರ್ಟಿ ಪ್ರಕರಣ.. ಶಾರುಖ್ ಪುತ್ರ ಸೇರಿ ಇತರೆ ಆರೋಪಿಗಳು ಅ. 7ರ ವರೆಗೆ ಎನ್ಸಿಬಿ ಕಸ್ಟ್ಡಿಗೆ
ಬಾಲಿವುಡ್ ಸ್ಟಾರ್‌ಗಳ ಪಾಲಿಗೆ ಸ್ಟಾರ್ ಅಡ್ವೋಕೇಟ್ ಆಗಿರುವ ಮಾನೆಶಿಂಧೆ ಅವರ ಕುಟುಂಬ ಧಾರವಾಡದಲ್ಲಿ ನೆಲೆಸಿದೆ. ಮಾನೆಶಿಂಧೆ ಅವರು ಗದಗ, ರೋಣ, ವಿಜಯಪುರ, ಧಾರವಾಡದ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ತಮ್ಮ ಶಿಕ್ಷಣ ಮುಗಿಸಿದ್ದಾರೆ.
ಶಾರುಖ್ ಪುತ್ರನ ಕೇಸ್ ನಡೆಸ್ತಿರುವ ಮಾನೆಶಿಂಧೆ ಕುರಿತು ಸ್ನೇಹಿತರ ಮಾತು ಗದಗ ಮತ್ತು ರೋಣ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಿಜಯಪುರ ಸೈನಿಕ ಶಾಲೆಯಲ್ಲಿ ಪಿಯುಸಿ, ಧಾರವಾಡದ ಕೆಸಿಡಿಯಲ್ಲಿ ಬಿಕಾಂ ಪದವಿ ಪಡೆದುಕೊಂಡಿದ್ದಾರೆ. ಸಿದ್ದಪ್ಪ ಕಂಬಳಿ ಲಾ ಕಾಲೇಜ್‌ನಲ್ಲಿ ಕಾನೂನು ಪದವಿ ಮುಗಿಸಿದ್ದಾರೆ. ಕಾನೂನು ಪದವಿ ಬಳಿಕ ಖ್ಯಾತ ವಕೀಲ ಹಾಗೂ ರಾಜಕಾರಣಿ ರಾಮ್ ಜೇಠ್ಮಲಾನಿ ಬಳಿ 10 ವರ್ಷ ಅಭ್ಯಾಸ ಮಾಡಿದ್ದಾರೆ.
ಹಳೇ ಸ್ನೇಹಿತರೆಂದರೆ ಅಚ್ಚುಮೆಚ್ಚು!
ಇಷ್ಟೊಂದು ಎತ್ತರಕ್ಕೆ ಬೆಳೆದರೂ ಕೂಡ ಇಂದಿಗೂ ಮಾನೆಶಿಂಧೆ ಅವರು ತಮ್ಮ ಹಳೆ ಸ್ನೇಹಿತರನ್ನು ಮರೆಯದೇ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ. ಮಾನೆಶಿಂಧೆ ಜೊತೆಗಿನ ನೆನಪುಗಳನ್ನು ಅವರ ಗೆಳೆಯ ಮುರಳೀಧರ ಕಡಕೋಳ ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ. ''ಸತೀಶ ಬಹಳ ಚುರುಕು ವ್ಯಕ್ತಿ. ಒಳ್ಳೆಯ ನಡವಳಿಕೆಯುಳ್ಳವರು. ಅವರು ಸೈನಿಕ್ ಸ್ಕೂಲ್ನಿಂದ ಬಂದಿರೋದ್ರಿಂದ ನಡತೆ ಉತ್ತಮವಾಗಿತ್ತು. ಎಲ್ಲರನ್ನೂ ನಗಿಸುತ್ತಾ ಇರುತ್ತಿದ್ದರು. ಅವರು ನಮ್ಮ ಒಳ್ಳೆಯ ಗೆಳೆಯ. ಚಿಕ್ಕಂದಿನಿಂದಲೇ ಬಹಳ ಧೈರ್ಯವಂತ. ಅವರ ತಾಯಿ ಕೂಡ ನಮ್ಮನ್ನೆಲ್ಲಾ ತಮ್ಮ ಮಕ್ಕಳ ಥರಾನೇ ನೋಡುತ್ತಿದ್ದರು. ನಾನು ಮುಂಬೈಗೆ ಹೋದಾಗ ಅವರನ್ನು ಭೇಟಿ ಆಗಲು ಹೋಗಿದ್ದೆ. ಅವರ ಆಫೀಸ್ನಲ್ಲಿ ಮೂರರಿಂದ ನಾಲ್ಕು ಗಂಟೆ ಕಾದು ಕುಳಿತಿದ್ದೆ. ಅವರು ಮೀಟಿಂಗ್ನಲ್ಲಿ ಬ್ಯುಸಿ ಇದ್ದಿದ್ದರಿಂದ ನನ್ನನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಆದರೆ ರಾತ್ರಿ 12 ಗಂಟೆಗೆ ಬಂದ ಮೇಲೆ ನಮಗೆ ಫೋನ್ ಮಾಡಿ ಸುಮಾರು 1 ಗಂಟೆ ಮಾತನಾಡಿದ್ದರು'' ಎಂದು ಹಿರಿಯ ವಕೀಲ ಸತೀಶ ಮಾನೆಶಿಂಧೆ ಅವರ ಜೊತೆಗಿನ ಗೆಳೆತನವನ್ನು ಕಡಕೋಳ ನೆನಪಿಸಿಕೊಂಡರು.
ಮಾನ್ಶಿಂಧೆ ಜೊತೆಗಿನ ನೆನಪುಗಳನ್ನು ಅವರ ಗೆಳೆಯರು ಮೆಲುಕು ಹಾಕಿದ್ದಾರೆ.