ಹುಬ್ಬಳ್ಳಿ: ಪಕ್ಷಕ್ಕಾಗಿ ದುಡಿದಿದ್ದೇನೆ. ನನಗೆ ಟಿಕೆಟ್ ಕೊಡ್ತಾರೆ ಎನ್ನುವ ವಿಶ್ವಾಸ ಇದೆ. ಸ್ಥಳೀಯರಿಗೆ ನಾನು ಪರಿಚಯ ಇಲ್ಲ ಎನ್ನುವುದು ತಪ್ಪು ಕಲ್ಪನೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶಾಕೀರ್ ಸನದಿತಿಳಿಸಿದರು.
ಪಕ್ಷಕ್ಕಾಗಿ ದುಡಿದಿರುವೆ, ಲೋಕಸಭಾ ಟಿಕೆಟ್ ನಂದೇ: ಶಾಕೀರ್ ಸನದಿ
ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಶಾಕೀರ್ ಸನದಿ ಮಧ್ಯೆ ಪೈಪೋಟಿ. ಪಕ್ಷಕ್ಕಾಗಿ ಶ್ರಮಿಸಿರುವೆ, ಟಿಕೆಟ್ ನನಗೆ ಕೊಡ್ತಾರೆ ಅನ್ನೋ ಭರವಸೆ ಶಾಕೀರ್ ಅವರಿಗಿದೆ. ಇನ್ನು ವಿನಯ್ ಕುಲಕರ್ಣಿ ಅವರು ಬಿ ಫಾರ್ಮ್ ಇಲ್ಲದೇ ಇಂದು ನಾಮಪತ್ರ ಸಲ್ಲಿಸಲು ತಯಾರಾಗಿದ್ದಾರೆ.
ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ಹಿಂದೆ ಈ ತರಹದ ಕಲ್ಪನೆಗಳು ನಮ್ಮ ಸಾಕಷ್ಟು ನಾಯಕರಿಗೆ ಕೇಳಿ ಬಂದಿದ್ದವು. ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ವಿನಯ ಕುಲಕರ್ಣಿಯವರು ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸುವ ಸಂದರ್ಭದಲ್ಲಿ ಹೀಗೆ ಕೇಳಿ ಬಂದಿದವು ಎಂದರು.
ಹೊಸ ಮುಖ ಅಂದ ಮೇಲೆ ಈ ತರಹದ ಪ್ರಶ್ನೆಗಳು, ಊಹಾಪೋಹಗಳು ಸಹಜ. ಮೊದಲ ಸಲ ಟಿಕೆಟ್ ಕೇಳಿದಾಗ ಎಲ್ಲರೂ ಇಂತಹ ಆರೋಪ ಎದುರಿಸಿರುತ್ತಾರೆ. ರಾಜ್ಯದಲ್ಲಿ ಎರಡು ಟಿಕೆಟ್ ಅಲ್ಪಸಂಖ್ಯಾತರಿಗೆ ಮೀಸಲು ಇದೆ. ಅದನ್ನು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ಪಾಲಿಸಿಕೊಂಡು ಬಂದಿದೆ. ಹೀಗಾಗಿ ನನಗೆ ಟಿಕೆಟ್ ನೀಡ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.