ಹುಬ್ಬಳ್ಳಿ:ಸಾಹಿತ್ಯ, ಸಂಗೀತ, ಹೋರಾಟ, ಶಿಕ್ಷಣದ ತವರು ಧಾರವಾಡ. ಕರ್ನಾಟಕ ವಿಶ್ವವಿದ್ಯಾನಿಲಯ, ಕೃಷಿ ವಿಶ್ವವಿದ್ಯಾನಿಲಯ, ಐಐಟಿಗಳಿಂದಾಗಿ ಶಿಕ್ಷಣ ಕಾಶಿ ಎಂಬ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಹೈಕೋರ್ಟ್ ಸಂಚಾರಿ ಪೀಠ, ನೈಋತ್ಯ ರೈಲ್ವೆ ವಲಯ, ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ತನ್ನ ಒಡಲಲ್ಲಿ ಹೊಂದಿರುವ ಜಿಲ್ಲೆ ಈ ಧಾರವಾಡ.
2008ರ ಕ್ಷೇತ್ರ ಪುನರ್ ವಿಂಗಡನೆಗಿಂತ ಮೊದಲು ಧಾರವಾಡ ಉತ್ತರ ಲೋಕಸಭಾ ಕ್ಷೇತ್ರವೆಂದು ಇದನ್ನು ಕರೆಯಲಾಗುತ್ತಿತ್ತು. ಧಾರವಾಡ ಜಿಲ್ಲೆಯ 7, ಹಾವೇರಿ ಜಿಲ್ಲೆಯ ಶಿಗ್ಗಾಂವ್ ವಿಧಾನ ಸಭೆ ಕ್ಷೇತ್ರ ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಧಾರವಾಡ ಲೋಕಸಭಾ ಕ್ಷೇತ್ರವನ್ನ ರಚನೆ ಮಾಡಲಾಗಿದೆ. ವಿಶೆಷ ಅಂದ್ರೆ, 1991ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿವಂಗತ ಡಿ.ಕೆ. ನಾಯ್ಕರ್ ಕೊನೆಯದಾಗಿ ಕಾಂಗ್ರೆಸ್ನಿಂದ ಆಯ್ಕೆಯಾಗಿದನ್ನು ಬಿಟ್ರೆ, ನಿರಂತರ 6 ಬಾರಿ ಬಿಜೆಪಿ ಅಭ್ಯರ್ಥಿಗಳೇ ಸತತವಾಗಿ ಧಾರವಾಡ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗುತ್ತಾ ಬಂದಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬುನಾದಿಯನ್ನು ಮತ್ತಷ್ಟು ಭದ್ರಪಡಿಸಲು ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಕೂಡ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿದ್ದು, ರಾಷ್ಟ್ರೀಯ ಪಕ್ಷಗಳ ನೇರ ಹಣಾಹಣಿಯಿಂದ ಕುತೂಹಲ ಕೆರಳಿಸಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ವಿನಯ್ ಕುಲಕರ್ಣಿಗೆ ಈ ಬಾರಿಯೂ ಟಿಕೆಟ್ ಸಿಗಬಹುದು ಎನ್ನಲಾಗುತ್ತಿದೆ. ಆದ್ರೆ ಧಾರವಾಡ ಕಟ್ಟಡ ದುರಂತ ಪ್ರಕರಣದಿಂದ ಹಿನ್ನಡೆಯಾಗಿದೆ.
ದುರಂತ ಕಟ್ಟಡ ವಿನಯ ಕುಲಕರ್ಣಿಯವರ ಮಾವನಿಗೆ ಸಂಬಂಧಿಸಿದ್ದು ಎಂಬ ಕಾರಣಕ್ಕೆ ಟಿಕೆಟ್ ಕೈ ತಪ್ಪುವ ಆತಂಕದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸದಾನಂದ ಡಂಗನವರ್ ಹಾಗೂ ಮಾಜಿ ಸಚಿವ ಸಂತೋಷ್ ಲಾಡ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಬಾರಿ ಧಾರವಾಡ ಕ್ಷೇತ್ರವನ್ನ ಅಲ್ಪಸಂಖ್ಯಾತ ಕೋಟಾದಡಿಯಲ್ಲಿ ಮುಸ್ಲಿಮರಿಗೆ ಬಿಟ್ಟುಕೊಡಬೇಕೆಂಬ ಮಾತು ಜೋರಾಗಿ ಕೇಳಿ ಬರುತ್ತಿದೆ. ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಸಿ.ಎಂ ಇಬ್ರಾಹಿಂ, ಮಾಜಿ ಸಂಸದ ಐಜಿ ಸನದಿ ಪುತ್ರ ಶಾಕೀರ್ ಸನದಿ ಟಿಕೆಟ್ಗಾಗಿ ಪ್ರಯತ್ನ ನಡೆಸಿದ್ದಾರೆ.
ಹ್ಯಾಟ್ರಿಕ್ ಜಯ ಸಾಧಿಸಿರುವ ಸಂಸದ ಪ್ರಹ್ಲಾದ್ ಜೋಶಿ ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು, ದೋಸ್ತಿಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಹರಸಾಹಸ ಪಡುತ್ತಿದ್ದು, ಇಲ್ಲೂ ಮೈತ್ರಿ ಖಚಿತವಾಗಿದೆ. ಪ್ರಬಲ ಕೋಮುಗಳಾದ ಲಿಂಗಾಯತ ಹಾಗೂ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಿದ್ರೆ ಮಾತ್ರ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಶಿ ಅವರನ್ನ ಕಟ್ಟಿಹಾಕಲು ಸಾಧ್ಯ ಅನ್ನೊ ಸುದ್ದಿ ದೋಸ್ತಿಗಳ ಪಾಳಯದಿಂದ್ಲೇ ಕೇಳಿ ಬರ್ತಿದೆ.
ಜೋಶಿಗೆ ಪ್ಲಸ್ ಪಾಯಿಂಟ್ಸ್..
ಇನ್ನು ಸಂಸದ ಪ್ರಹ್ಲಾದ ಜೋಶಿ ಅವರ ಕೆಲಸ ನಮಗೆ ತೃಪ್ತಿದಾಯಕವಾಗಿದೆ ಅಂತ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಸಂಸದ ಪ್ರಹ್ಲಾದ್ ಜೋಶಿಯವರು ಕೇಂದ್ರದಿಂದ ಸ್ಮಾರ್ಟ್ ಸಿಟಿ, ಐಐಟಿ ಮತ್ತು ಏಮ್ಸ್ ಅನ್ನು ಹುಬ್ಬಳ್ಳಿ- ಧಾರವಾಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಅನ್ನೋ ಮಾತು ಇದೆ. ಮುಖ್ಯವಾಗಿ 6 ಸಾವಿರ ಕೋಟಿ ರೂಪಾಯಿ ಸಿರ್ಎಫ್ ಅನುದಾನ ತಂದು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹಾಗೂ ನಗರ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣವನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ವಿಶೇಷ ಅನುದಾನ ತಂದಿರುವುದಲ್ಲದೇ, ಸಾಕಷ್ಟು ವಾಣಿಜ್ಯ ನಗರಗಳಿಗೆ ಹುಬ್ಬಳ್ಳಿಯನ್ನ ಸಂಪರ್ಕ ಕೊಂಡಿಯನ್ನಾಗಿ ಮಾಡಿದ್ದಾರೆ. ಹುಬ್ಬಳ್ಳಿ ರೈಲ್ವೇ ನಿಲ್ದಾಣ ಮತ್ತು ವರ್ಕ್ಶಾಪ್ ಅಧುನೀಕರಣ ಹಾಗೂ ಗುಡ್ಶೆಡ್ ನಿರ್ಮಾಣ, ಐವತ್ತು ಹಾಸಿಗೆಗಳ ರಾಜ್ಯ ಕಾರ್ಮಿಕ ವಿಮಾ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಶ್ರಮಿಸಿದ್ದಾರೆ. ಅಲ್ಲದೆ, ಕ್ಲೀನ್ ಇಮೇಜ್ ಮತ್ತು ಸುಲಭ ಲಭ್ಯತೆಯ ಕಾರಣ ಜನರಲ್ಲಿ ಉತ್ತಮ ಅಭಿಪ್ರಾಯವಿದೆ.
ಮೈನಸ್ ಪಾಯಿಂಟ್ಸ್...
ಸಂಸದರನ್ನ ಕೊಂಡಾಡೋ ವರ್ಗ ಒಂದೆಡೆಯಾದ್ರೆ, ಅವರೇನೂ ಹೇಳಿಕೊಳ್ಳೊ ಅಭಿವೃದ್ಧಿ ಕೆಲ್ಸ ಮಾಡಿಲ್ಲ ಅನ್ನೊ ವರ್ಗದವರೂ ಇದ್ದಾರೆ. ಪ್ರಮುಖವಾಗಿ ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ತೀರ್ಪು ಬಂದ್ರೂ ಕೂಡ, ಕೇಂದ್ರದಿಂದ ಗೆಜೆಟ್ ಹೊರಡಿಸಲು ಶ್ರಮಿಸಿಲ್ಲ. ಅಲ್ಲದೆ, ಉದ್ಯೋಗ ಸೃಷ್ಟಿಯಲ್ಲಿ ವಿಫಲರಾಗಿದ್ದು, ವಿದ್ಯಾವಂತ ಯುವಕರು ಕೆಲಸ ಅರಸಿ ಹೊರ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ದೊಡ್ಡ ಉದ್ಯಮ ಮತ್ತು ಕೈಗಾರಿಕೆಗಳನ್ನು ತರುವುದು ಈವರೆಗೂ ಸಾಧ್ಯವಾಗಿಲ್ಲ. ಸಿಆರ್ಎಫ್ ಅಡಿ ಸಾವಿರಾರು ಕೋಟಿ ಅನುದಾನ ಬಂದರೂ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಹಾಗೂ ವಿಮಾನ ನಿಲ್ದಾಣ ಅಭಿವೃದ್ಧಿಗೆ ಜಮೀನನ್ನ ಸ್ವಾಧೀನ ಪಡಿಸಿಕೊಂಡ ಜಮೀನು ಮಾಲಿಕರಿಗೆ ಈವರೆಗೂ ಹೆಚ್ಚುವರಿ ಹಣ ಕೊಡಿಸಿಲ್ಲ. ಸಂಸದರ ಆದರ್ಶ ಗ್ರಾಮ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ ಎಂದು ಸಾಕಷ್ಟು ಆರೋಪಗಳು ಪ್ರಹ್ಲಾದ್ ಜೋಶಿ ಅವರನ್ನ ಸುತ್ತಿಕೊಂಡಿವೆ.