ಹುಬ್ಬಳ್ಳಿ: ಶಿಕ್ಷಣ ಕಾಶಿ ಎಂದೇ ಖ್ಯಾತಿ ಪಡೆದ ಜಿಲ್ಲೆ ಧಾರವಾಡ. ಈ ಜಿಲ್ಲೆಯಲ್ಲಿ ಸಾಹಿತ್ಯ, ಶಿಕ್ಷಣ, ಸಂಸ್ಕೃತಿ ಬೆಳೆಯುತ್ತಿರುವ ರೀತಿಯಲ್ಲಿ ಅಪರಾಧ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಕಳೆದ ಐದು ವರ್ಷ ಜಿಲ್ಲೆಗೆ ಕರಾಳ ವರ್ಷವಾಗಿಯೇ ಪರಿಣಮಿಸಿದೆ. ಬಡ್ಡಿಗೆ ಪಡೆದ ಹಣ ಮರಳಿ ನೀಡದಿರುವುದು, ಕೌಟುಂಬಿಕ ಕಲಹ, ಪ್ರೀತಿ ನಿರಾಕರಣೆ, ಮದ್ಯದ ನಶೆ, ವಿವಾಹೇತರ ಸಂಬಂಧದ ಜೊತೆಗೆ ಕ್ಷುಲ್ಲಕ ಕಾರಣ ಹೀಗೆ ಹಲವಾರು ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಬರೋಬ್ಬರಿ 188 ಮಂದಿ ಹತ್ಯೆಗೀಡಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್‌ನಲ್ಲಿ 88 ಮಂದಿ, ಧಾರವಾಡ ಜಿಲ್ಲೆಯ ವಿವಿಧೆಡೆ 100 ಮಂದಿ ಸಾವನ್ನಪ್ಪಿದ್ದಾರೆ. ಬಹುತೇಕ ಕೊಲೆಗಳಿಗೆ ದ್ವೇಷ ಹಾಗೂ ಹಣಕಾಸಿನ ವ್ಯವಹಾರ ಕಾರಣವಾಗಿದ್ದರೆ, ಕೆಲವು ಕೊಲೆಗಳು ವರದಕ್ಷಿಣೆ, ಕೌಟುಂಬಿಕ ಕಲಹ, ಪ್ರೀತಿ-ಪ್ರೇಮ, ಮದ್ಯದ ನಶೆಯಿಂದಲೂ ನಡೆದಿವೆ. ದ್ವೇಷ, ಪ್ರತಿಷ್ಠೆಗೂ ಕೆಲವು ರೌಡಿಗಳು ಬಲಿಯಾಗಿದ್ದಾರೆ. ಅತ್ಯಾಚಾರ ಮಾಡಿ, ಕೆಲವು ಮಹಿಳೆಯರನ್ನು ಹತ್ಯೆ ಮಾಡಲಾಗಿದೆ. ಪೊಲೀಸ್ ಇಲಾಖೆಯಿಂದ ಎಷ್ಟೇ ಕ್ರಮಗಳನ್ನು ಕೈಗೊಂಡರೂ ಪೂರ್ತಿ ಕಡಿವಾಣ ಮಾತ್ರ ಸಾಧ್ಯವಾಗಿಲ್ಲ.