ಕರ್ನಾಟಕ

karnataka

ETV Bharat / city

ಕೊರೊನಾ ಹರಡುವ ಭೀತಿ; ಧಾರವಾಡ ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕಿಲ್ಲ ಅವಕಾಶ - ಡಿಸಿ ನಿತೇಶ ಪಾಟೀಲ - ಧಾರವಾಡ ಜಿಲ್ಲಾ ಸುದ್ದಿ

ಕೋವಿಡ್-19 ನಿಯಂತ್ರಣ ಹಿನ್ನೆಲೆ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ಇಲ್ಲ. ದೇವಸ್ಥಾನ, ಮನೆಗಳಲ್ಲಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ಪ್ರಮಾಣೀಕೃತ ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.

Covid-19 Effect: Ganesh installation is not allowed in a public place-Darwad dc patil
ಕೊರೊನಾ ಹರಡುವ ಭೀತಿ; ಧಾರವಾಡ ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕಿಲ್ಲ ಅವಕಾಶ - ಡಿಸಿ ನಿತೇಶ ಪಾಟೀಲ

By

Published : Aug 10, 2021, 1:41 AM IST

ಧಾರವಾಡ:ಬರುವ ಸೆಪ್ಟೆಂಬರ್‌ನಲ್ಲಿ ಆಚರಿಸಲಾಗುವ ಗಣೇಶ ಚತುರ್ಥಿ ಸಂದರ್ಭದಲ್ಲಿ ಕೋವಿಡ್-19 ನಿಯಂತ್ರಣದ ಮುಂಜಾಗೃತೆಗಾಗಿ ಕಳೆದ ವರ್ಷದಂತೆ ಈ ವರ್ಷವೂ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶವಿಲ್ಲ. ಸುರಕ್ಷತಾ ಕ್ರಮಗಳೊಂದಿಗೆ ದೇವಸ್ಥಾನ ಹಾಗೂ ಮನೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬಹುದು. ಸಿ.ಎಸ್.ಐ.ಆರ್ (CSIR) ಮತ್ತು ನೀರಿ (NEERI) ಪ್ರಮಾಣೀಕೃತ ಹಸಿರು ಪಟಾಕಿ ಮಾತ್ರ ಉಪಯೋಗಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗಣೇಶ ಚತುರ್ಥಿ ಹಬ್ಬದ ಆಚರಣೆಯ ಮುಂಜಾಗೃತ ಕ್ರಮಗಳ ಜಿಲ್ಲಾಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರತಿದಿನ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿಯೂ ಆಗಸ್ಟ್ ಅಂತ್ಯಕ್ಕೆ ಏರಿಕೆಯಾಗುವ ಸಂಭವವಿದೆ. ಸೆಪ್ಟಂಬರ್ ವೇಳೆಗೆ ಸಂಭಾವ್ಯ 3ನೇ ಅಲೆ ಅತ್ಯಧಿಕವಾಗುವ ಸಾಧ್ಯತೆಗಳಿವೆ. ಮೊದಲ ಮತ್ತು ಎರಡನೇ ಅಲೆಯ ಪರಿಣಾಮಗಳನ್ನು ಅರಿತಿರುವ ನಾವು ಇದೀಗ ಹೆಚ್ಚು ಎಚ್ಚರವಹಿಸಬೇಕು. ಈ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶವಿಲ್ಲ ಎಂದು ಹೇಳಿದರು.

ದೇವಸ್ಥಾನ ಹಾಗೂ ಮನೆಗಳಲ್ಲಿ ಮಾತ್ರ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪ್ರತಿಷ್ಠಾಪಿಸಬಹುದು. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ನಿಂದ ತಯಾರಿಸಿದ ಗಣೇಶ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ಗಣೇಶ ವಿಗ್ರಹ ತಯಾರಕರು ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಹೊರ ರಾಜ್ಯಗಳಿಂದ ಇಂತಹ ಮೂರ್ತಿಗಳು ಬರುವ ಮಾಹಿತಿ ಇದ್ದರೆ ಜಿಲ್ಲಾಡಳಿತ, ಪೊಲೀಸ್ ಅಥವಾ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರೆ ಅಂತಹ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗುವುದು. ಜಲಮೂಲಗಳಾದ ನದಿ, ಕೆರೆ, ಕಾಲುವೆ ಹಾಗೂ ಬಾವಿಗಳಲ್ಲಿ ಬಣ್ಣ ಲೇಪಿತ ವಿಗ್ರಹಗಳ ವಿಸರ್ಜನೆ ನಿಷೇಧಿಸಲಾಗಿದೆ. ಗಣೇಶ ವಿಗ್ರಹಗಳ ವಿಸರ್ಜನೆಗೆ ಮಹಾನಗರ ಪಾಲಿಕೆ ಹಾಗೂ ಇತರ ಸ್ಥಳೀಯ ಸಂಸ್ಥೆಗಳು ಕೃತಕ ಟ್ಯಾಂಕುಗಳ ವ್ಯವಸ್ಥೆ ಮಾಡಲಿವೆ. ಸರ್ಕಾರ ಕಾಲ ಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಜಾರಿ ಮಾಡಲಾಗುವುದು ಎಂದರು.

ಇದನ್ನೂ ಓದಿ: ಮಹಾರಾಷ್ಟ್ರ,ಕೇರಳದಿಂದ ಬರುವವರಿಗೆ ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ

ಪ್ರಮಾಣೀಕೃತ ಹಸಿರು ಪಟಾಕಿಗೆ ಮಾತ್ರ ಅವಕಾಶ

ಪರಿಸರ ಮತ್ತು ಶಬ್ದ ಮಾಲಿನ್ಯವನ್ನು ತಡೆಗಟ್ಟಲು ಸಿಎಸ್‌ಐಆರ್ (CSIR) ಮತ್ತು ನೀರಿ (NEERI) ಪ್ರಮಾಣೀಕೃತ ಹಸಿರು ಪಟಾಕಿ ಮಾತ್ರ ಉಪಯೋಗಿಸಬೇಕು. ಪಟಾಕಿ ಮಾರಾಟಗಾರರು ಈ ಬಗ್ಗೆ ಎಚ್ಚರವಹಿಸಬೇಕು. ಅಧಿಕೃತ ಲಾಂಛನ ಹಾಗೂ ಕ್ಯೂಆರ್ ಕೋಡ್ ಇಲ್ಲದ ಪಟಾಕಿಗಳನ್ನು ಮಾರಾಟಗಾರರು ದಾಸ್ತಾನು ಮಾಡಿಕೊಳ್ಳಬಾರದು. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ 2020ರ ನವೆಂಬರ್‌ 9 ರಂದು ನೀಡಿರುವ ಆದೇಶವನ್ನು ಕಡ್ಡಾಯವಾಗಿ ಜಾರಿಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಭೆಯಲ್ಲಿ ವಿವರಿಸಿದರು.

ABOUT THE AUTHOR

...view details